ಹುಬ್ಬಳ್ಳಿ, ಜ 28 (DaijiworldNews/DB): ಭಾರತ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದಲ್ಲೇ ನಂಬರ್ 1 ಆಗಬೇಕು. ಇಂತಹ ಉತ್ತುಂಗಕ್ಕೇರಲು ದೇಶದ ವಿದ್ಯಾರ್ಥಿಗಳ ಪಾತ್ರ ದೊಡ್ದದಾಗಿದೆ. ಇದಕ್ಕಾಗಿ ನಾವು ಸಂಕಲ್ಪ ಮಾಡೋಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಅವರು, 2014 ದೇಶದ ಭವಿಷ್ಯದಲ್ಲಿ ಪರಿವರ್ತನೆ ಆರಂಭಗೊಂಡ ವರ್ಷ. ಕಳೆದ ಎಂಟು ವರ್ಷಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ನಾವು ಅಭಿವೃದ್ದಿ ಸಾಧಿಸಿದ್ದೇವೆ. ಭಾರತ ವಿಶ್ವದೆದುರು ನಾಯಕನ ಸ್ಥಾನದಲ್ಲಿ ನಿಂತಿದೆ. ನಮ್ಮ ಶಕ್ತಿಯನ್ನು ಇಡೀ ವಿಶ್ವಕ್ಕೆ ತೋರಿಸಬೇಕಿದೆ. ಅದಕ್ಕಾಗಿ ತಾಂತ್ರಿಕತೆಯಲ್ಲಿ ದೇಶ ನಂ1 ಆಗಬೇಕು ಎಂದರು.
ತಾಂತ್ರಿಕ ಕ್ಷೇತ್ರದ ಅಭಿವೃದ್ದಿ ವಿದ್ಯಾರ್ಥಿಗಳ ಕೈಯಲ್ಲಿದೆ. ಸ್ವಾತಂತ್ರ ಹೋರಾಟಗಾರರ ಕನಸು ನನಸಾಗಬೇಕಾದರೆ ವಿದ್ಯಾರ್ಥಿಗಳು ಶಕ್ತಿ ಮೀರಿ ಶ್ರಮಿಸಬೇಕು. ಹೀಗಾಗಿ ವಿಶ್ವದ ಮುಂದೆ ಭಾರತ ತಾಂತ್ರಿಕತೆಯಲ್ಲೂ ನಂ1 ಆಗುವ ನಿಟ್ಟಿನಲ್ಲಿ ಈಗಿಂದಲೇ ಸಂಕಲ್ಪ ಮಾಡೋಣ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮತ್ತಿತರರು ಭಾಗವಹಿಸಿದ್ದರು.