ನವದೆಹಲಿ, ಜ 28 (DaijiworldNews/DB): ಭಾರತ್ ಜೋಡೋ ಯಾತ್ರೆ ಶ್ರೀನಗರದಲ್ಲಿ ಸಮಾಪನಗೊಳ್ಳುವವರೆಗೂ ಯಾತ್ರೆಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಮಲ್ಲಿಕಾರ್ಜುನ ಖರ್ಗೆ, ಭಾರತ್ ಜೋಡೋ ಯಾತ್ರೆಯಲ್ಲಿ ಭದ್ರತಾ ಲೋಪ ಉಂಟಾಗುತ್ತಿದೆ. ತಾವು ಈ ಸಂಬಂಧ ಮಧ್ಯಪ್ರವೇಶಿಸಿ ಸರಿಯಾದ ಭದ್ರತೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕು. ಯಾತ್ರೆ ಸಮಾಪನಗೊಳ್ಳುವವರೆಗೂ ಭದ್ರತೆಯಲ್ಲಿ ಯಾವುದೇ ಲೋಪ ಉಂಟಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.
ಜನವರಿ 30ರಂದು ಶ್ರೀನಗರದಲ್ಲಿ ಯಾತ್ರೆ ಸಮಾಪನಗೊಳ್ಳಲಿದೆ. ಈ ವೇಳೆ ಅಪಾರ ಪ್ರಮಾಣದಲ್ಲಿ ಜನ ಸೇರುವ ನಿರೀಕ್ಷೆಯಿದೆ. ಹೀಗಾಗಿ ಭದ್ರತೆಯಲ್ಲಿ ಎಲ್ಲಿಯೂ ಲೋಪ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರೆ ನಾನು ನಿಮಗೆ ಕೃತಜ್ಞನಾಗಿರುತ್ತೇನೆ ಎಂದು ಬರೆದಿದ್ದಾರೆ.
ಭದ್ರತಾ ಲೋಪದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಭಾರತ್ ಜೋಡೋ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಖಾಸಿಗುಂಡ್ ಪ್ರವೇಶಿಸಿದ ಯಾತ್ರೆಯ ವೇಳೆ ಅಲ್ಲಿ ಜನ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ಆದರೆ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಜನರನ್ನು ನಿಯಂತ್ರಿಸುವ ಕೆಲಸ ಮಾಡಿರಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.