ಕೇರಳ,ಮಾ.12(AZM): ವಿದ್ಯಾರ್ಥಿನಿಯೋರ್ವಳು ತನ್ನನ್ನು ಪ್ರೀತಿಸಿಲ್ಲ ಎನ್ನುವ ಕಾರಣಕ್ಕಾಗಿ ಭಗ್ನ ಪ್ರೇಮಿಯೊಬ್ಬ ಆಕೆಯನ್ನು ಚೂರಿಯಿಂದ ಇರಿದು, ಬೆಂಕಿ ಹಚ್ಚಿ ಕೊಲ್ಲಲು ಪ್ರಯತ್ನಿಸಿದ ಘಟನೆ ಕೇರಳದ ಕೋಟಯಂ ಜಿಲ್ಲೆಯ ತಿರುವಲ್ಲ ಎಂಬಲ್ಲಿ ನಡೆದಿದ್ದು, ಪೊಲೀಸರು ಈ ಕುರಿತು ಇಂದು ಮಾಹಿತಿ ನೀಡಿದ್ದಾರೆ.
ರೆಡಿಯೋಲಜಿ ಕೋರ್ಸ್ ಮಾಡುತ್ತಿದ್ದ 22ರ ಹರೆಯದ ವಿದ್ಯಾರ್ಥಿನಿ ತನ್ನ ಮನೆಯಿಂದ ಕಾಲೇಜಿಗೆ ಹೋಗುತ್ತಿದ್ದಳು. ಈ ವೇಳೆ ಜನನಿಬಿಡ ರಸ್ತೆಯಲ್ಲೇ ಬೆಚ್ಚಿಬೀಳಿಸುವ ಈ ಕೃತ್ಯ ನಡೆದಿದೆ. ಘಟನೆಯಲ್ಲಿ ವಿದ್ಯಾರ್ಥಿನಿಗೆ ಶೇ.70ರಷ್ಟು ಸುಟ್ಟ ಗಾಯಗಳಾಗಿದ್ದು, ಖಾಸಗೀ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎನ್ನಲಾಗಿದೆ. ಆರೋಪಿಯನ್ನು ಅಜಿನ್ ರೀ ಮ್ಯಾಥ್ಯೂ ಎಂದು ಗುರುತಿಸಲಾಗಿದ್ದು, ಈತ ಕೃತ್ಯ ನಡೆಸಿ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದ. ಆದರೆ ಸ್ಥಳೀಯರು ತಕ್ಷಣ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿದ್ಯಾರ್ಥಿನಿಯನ್ನು ತಾನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದು, ಆಕೆ ನನ್ನ ಪ್ರೀತಿಯನ್ನು ತಳ್ಳಿ ಹಾಕಿ ಮದುವೆಗೆ ನಿರಾಕರಿಸಿದಳು. ಹಾಗಾಗಿ ಆಕೆಯನ್ನು ಕೊಲ್ಲಲು ಪ್ರಯತ್ನಿಸಿದೆ ಎಂದು ವಿಚಾರಣೆಯ ವೇಳೆ ಆರೋಪಿ ಪೊಲೀಸರೊಂದಿಗೆ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿಯ ಸ್ಕೂಟರ್ನಿಂದ ಪೆಟ್ರೊಲ್ ಕ್ಯಾನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.