ಗುವಾಹಟಿ, ಜ 28 (DaijiworldNews/DB): ಸೂಕ್ತ ವಯಸ್ಸಿನಲ್ಲಿ ಮಹಿಳೆಯರು ತಾಯ್ತನ ಸ್ವೀಕರಿಸದಿದ್ದರೆ ಹಲವು ವೈದ್ಯಕೀಯ ತೊಡಕುಗಳಿಗೆ ಕಾರಣವಾಗುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 22 ವರ್ಷದಿಂದ 30 ವರ್ಷಗಳು ತಾಯ್ತನಕ್ಕೆ ಸೂಕ್ತವಾದ ವಯಸ್ಸು. ತಾಯಿಯಾಗಲು ಹೆಚ್ಚು ಸಮಯ ಕಾಯದೆ ಈ ವಯಸ್ಸಿನೊಳಗೆ ತಾಯ್ತನ ಅನುಭವಿಸಬೇಕು. ಇಲ್ಲವಾದಲ್ಲಿ ವೈದ್ಯಕೀಯ ತೊಡಕುಗಳು ಎದುರಾಗುತ್ತವೆ ಎಂದರು.
ಅಪ್ರಾಪ್ತ ವಯಸ್ಸಿನಲ್ಲಿ ವಿವಾಹವಾಗುವುದು ಮತ್ತು ತಾಯ್ತನ ಸ್ವೀಕರಿಸುವ ನಿಟ್ಟಿನಲ್ಲಿ ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. 14 ವರ್ಷಕ್ಕಿಂತ ಕಡಿಮೆ ಅವಧಿಯ ಹೆಣ್ಣು ಮಕ್ಕಳೊಂದಿಗೆ ಲೈಂಗಿಕ ಸಂಬಂಧ ಹೊಂದುವುದು ಅಪರಾಧ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಮದುವೆಯಾಗುವುದು, ಅವರೊಂದಿಗೆ ಲೈಂಗಿಕ ಸಂಬಂಧ ಹೊಂದುವುದು ಅಪರಾಧ. ಅಂತಹವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ಐದಾರು ತಿಂಗಳಲ್ಲಿ ಬಂಧಿಸಲಾಗುವುದು ಎಂದರು.