ಕೊಟ್ಟಾಯಂ, ಜ 28 (DaijiworldNews/DB): 20 ಮಕ್ಕಳ ಶಿಕ್ಷಣದ ಜವಾಬ್ದಾರಿ ವಹಿಸಿಕೊಂಡು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಸರ್ಕಾರಿ ಅಧಿಕಾರಿಗಳಿಬ್ಬರು ಮಾದರಿಯಾಗಿದ್ದಾರೆ. ಈ ದಂಪತಿಯ ಮಹಾನ್ ಕೆಲಸಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ನಾಗರಿಕ ಸೇವಾ ಪರೀಕ್ಷೆಯಲ್ಲಿ ಉನ್ನತ ರ್ಯಾಂಕ್ ಪಡೆದ ಆರ್ಯಾ ಆರ್. ನಾಯರ್ ಮತ್ತು ಅಹಮದಾಬಾದ್ನ ಭಾರತೀಯ ಅಂಚೆ ಸೇವೆಯ (ಐಪಿಒಎಸ್) ಸೂಪರಿಂಟೆಂಡೆಂಟ್ ಆಗಿರುವ ಶಿವಂ ತ್ಯಾಗಿ ಅವರೇ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟು 20 ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ನೆರವಾದವರು.
ಇತ್ತೀಚಿನ ದಿನಗಳಲ್ಲಿ ದುಂದುವೆಚ್ಚ ಮಾಡಿ ವಿವಾಹವಾಗುವವರೇ ಹೆಚ್ಚು. ಆದರೆ ಸರ್ಕಾರಿ ಅಧಿಕಾರಿಗಳಾದರೂ ಆರ್ಯಾ ಹಾಗೂ ಶಿವಂ ತಮ್ಮ ಜೀವನದ ಅಮೂಲ್ಯ ಘಳಿಗೆಯಲ್ಲಿ ಮಾನವೀಯ ಕಾರ್ಯ ಮಾಡುವ ಮೂಲಕ ಆ ಖುಷಿಯನ್ನು ಸ್ಮರಣೀಯವಾಗಿಸಿದ್ದಾರೆ. ಇವರಿಬ್ಬರ ಮದುವೆ ಪಂಪಾಡಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿಶೇಷ ವಿವಾಹ ಕಾಯಿದೆಯಂತೆ ನಡೆಯಿತು. ಆ ಬಳಿಕ ಕೊಟ್ಟಾಯಂನ ವಝೂರ್ನಲ್ಲಿರುವ 'ಪುಣ್ಯಂ' ಎಂಬ ಮಕ್ಕಳ ಮನೆಯಲ್ಲಿರುವ 20 ಮಕ್ಕಳ ಶೈಕ್ಷಣಿಕ ವೆಚ್ಚದ ಜವಾಬ್ದಾರಿಯನ್ನು ಈ ನವದಂಪತಿ ವಹಿಸಿಕೊಂಡರು.
ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆ-2020 ರಲ್ಲಿ 113 ನೇ ರ್ಯಾಂಕ್ ಗಳಿಸಿರುವ ಆರ್ಯಾ, ಪ್ರಸ್ತುತ ಭಾರತೀಯ ಕಂದಾಯ ಸೇವೆಗಾಗಿ ನಾಗಪುರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅವರು ಮೂಲತಃ ಕೊಟ್ಟಾಯಂನವರು. ಶಿವಂ ತ್ಯಾಗಿ ದೆಹಲಿಯವರು.