ನವದೆಹಲಿ, ಜ 28 (DaijiworldNews/DB): ಕೇಂದ್ರ ಸರ್ಕಾರದಿಂದ ಪರಿಚಯಿಸಲ್ಪಟ್ಟ ವಂದೇ ಭಾರತ್ ರೈಲಿನಲ್ಲಿ ಕಸದ ರಾಶಿಯೇ ಪತ್ತೆಯಾಗಿದೆ. ಇದು ರೈಲೋ, ಕಸದ ಬುಟ್ಟಿಯೋ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿದ್ದ ಕಸದ ರಾಶಿಯ ಫೋಟೋವನ್ನು ಐಎಎಸ್ ಅಧಿಕಾರಿ ಅವನೀಶ್ ಸರಣ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಸ್ವಚ್ಚತೆ ಕಾಪಾಡದ ಪ್ರಯಾಣಿಕರ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ. ರೈಲಿನಲ್ಲಿ ನೀರಿನ ಬಾಟಲಿಗಳು, ಪ್ಲಾಸ್ಟಿಕ್ ಚೀಲ, ಆಹಾರದ ಕವರ್ಗಳನ್ನು ಎಸೆಯಲಾಗಿದ್ದು, ಪ್ರಯಾಣಿಕರು ಎಸೆದ ವಸ್ತುಗಳನ್ನು ರೈಲ್ವೇ ಸಿಬಂದಿ ಸ್ವಚ್ಚಗೊಳಿಸುತ್ತಿದ್ದಾರೆ.
ಆಧುನಿಕ ಸೌಲಭ್ಯಗಳೊಂದಿಗೆ ಪ್ರಯಾಣಿಕರ ಅನುಕೂಲತೆಗಾಗಿ ವಂದೇ ಭಾರತ್ ಎಕ್ಸ್ಪ್ರೆಸ್ ಪರಿಚಯಿಸಲಾಗಿದೆ. ಆದರೆ ರೈಲಿನಲ್ಲಿ ಕಸದ ರಾಶಿ ಎಸೆದಿರುವ ಪ್ರಯಾಣಿಕರ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜವಾಬ್ದಾರಿ ಏನು ಎಂಬುದೇ ಜನರಿಗೆ ತಿಳಿದಿಲ್ಲ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.