ರಾಜಸ್ಥಾನ, ಜ 28 (DaijiworldNews/DB): ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಮತ್ತು ಸೈದ್ದಾಂತಿಕವಾಗಿ ಭಾರತವನ್ನು ಒಡೆಯುವ ಪ್ರಯತ್ನಗಳು ನಡೆದಿವೆ. ಆದರೆ ಭಾರತವನ್ನು ಮುಗಿಸಲು ಯಾವ ಶಕ್ತಿಗೂ ಅಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜಸ್ಥಾನದಲ್ಲಿ ಭಗವಾನ್ ಶ್ರೀ ದೇವನಾರಾಯಣ ಅವರ 1111ನೇ ಅವತಾರ ಮಹೋತ್ಸವದ ಸ್ಮರಣಾರ್ಥ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಇತಿಹಾಸ, ನಾಗರಿಕತೆ, ಸಂಸ್ಕೃತಿ ಸಾವಿರಾರು ವರ್ಷಗಳಷ್ಟು ಹಳೆಯದು. ಇದಕ್ಕಾಗಿ ನಾವು ಹೆಮ್ಮೆ ಪಡಬೇಕು. ಆದರೆ ಇಂತಹ ಪುರಾತನ ಇತಿಹಾಸ, ನಾಗರಿಕತೆಯನ್ನು ಒಡೆಯುವ ಪ್ರಯತ್ನಗಳು ನಡೆದಿವೆ. ಯಾವುದೇ ಶಕ್ತಿಗಳು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಭಾರತ ಕೇವಲ ಭೂ ಪ್ರದೇಶವಾಗಿ ಉಳಿದಿಲ್ಲ. ನಾಗರಿಕತೆ, ಸಂಸ್ಕೃತಿ, ಸಾಮರಸ್ಯ, ಸಾಧ್ಯತೆಗಳ ಅಭಿವ್ಯಕ್ತಿಯಾಗಿ ಭಾರತ ಗೋಚರಿಸುತ್ತದೆ. ಭಾರತದ ಭವ್ಯ ಭವಿಷ್ಯದ ಅಡಿಪಾಯವೂ ಅದೇ ಆಗಿದೆ. ನಮ್ಮ ಸಮಾಜದ ಶಕ್ತಿ, ಸಾಮರ್ಥ್ಯಗಳೇ ಇದರ ಹಿಂದಿನ ಸ್ಪೂರ್ತಿ ಎಂದವರು ತಿಳಿಸಿದರು.