ಬೆಳಗಾವಿ, ಜ 29 (DaijiworldNews/DB): ಮಧ್ಯಪ್ರದೇಶದ ಗ್ವಾಲಿಯರ್ ಸಮೀಪ ಸುಖೋಯ್ 30 ಎಂಕೆಐ ಹಾಗೂ ಮಿರಾಜ್ 2000 ಯುದ್ಧ ವಿಮಾನಗಳ ಮಧ್ಯೆ ಶನಿವಾರ ನಡೆದ ಅಪಘಾತದಲ್ಲಿ ಬೆಳಗಾವಿಯ ವಿಂಗ್ ಕಮಾಂಡರ್ ಹುತಾತ್ಮರಾಗಿದ್ದಾರೆ.
ಬೆಳಗಾವಿ ಗಣೇಶಪುರದ ಹನುಮಂತರಾವ್ ಸಾರಥಿ (34) ಹುತಾತ್ಮರಾದ ವಿಂಗ್ ಕಮಾಂಡರ್. ಪತನಗೊಂಡ ಮಿರಾಜ್ 2000 ಯುದ್ದ ವಿಮಾನವನ್ನು ಅವರು ಮುನ್ನಡೆಸುತ್ತಿದ್ದರು. ಭಾರತೀಯ ವಾಯುಪಡೆಯಲ್ಲಿ 2009ರಿಂದ ಸೇವೆ ಸಲ್ಲಿಸುತ್ತಿದ್ದ ಹನುಮಂತ ರಾವ್ ಗ್ವಾಲಿಯರ್ನಲ್ಲೇ ನೆಲೆಸಿದ್ದರು. ಅವರ ತಂದೆ ರೇವಣಸಿದ್ದಪ್ಪ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಸಹೋದರ ಪ್ರವೀಣ ಪ್ರಸ್ತುತ ಭಾರತೀಯ ವಾಯುಪಡೆಯಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿದ್ದಾರೆ. ತಂದೆ, ತಾಯಿ, ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಹನುಮಂತ ರಾವ್ ಅಗಲಿದ್ದಾರೆ. ವಿಂಗ್ ಕಮಾಂಡರ್ ಹನುಮಂತರಾವ್ ಅವರ ಪಾರ್ಥಿವ ಶರೀರ ವಿಶೇಷ ವಿಮಾನದಲ್ಲಿ ರವಿವಾರ ಗಣೇಶಪುರಕ್ಕೆ ಆಗಮಿಸಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ತರಬೇತಿ ಹಾರಾಟಕ್ಕಾಗಿ ಎರಡೂ ಯುದ್ದ ವಿಮಾನಗಳು ಗ್ವಾಲಿಯರ್ ವಾಯುನೆಲೆಯಿಂದ ಟೇಕಾಫ್ ಆಗಿದ್ದವು. ಈ ವೇಳೆ ಎರಡೂ ವಿಮಾನಗಳು ಪತನಗೊಂಡಿದ್ದು, ಸುಖೋಯ್ನಲ್ಲಿದ್ದ ಇಬ್ಬರು ಪೈಲಟ್ಗಳು ಹೊರಗೆ ಹಾರಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ. ಆದರೆ ಮಿರಾಜ್ ವಿಮಾನವನ್ನು ಮುನ್ನಡೆಸುತ್ತಿದ್ದ ಹನುಮಂತ ರಾವ್ ಹುತಾತ್ಮರಾದರು.