ಬೆಂಗಳೂರು, ಜ 29 (DaijiworldNews/DB): ಸ್ಯಾಂಡಲ್ವುಡ್ ಹಿರಿಯ ನಟ ಮಂದೀಪ್ ರಾಯ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
73 ವರ್ಷದ ಮಂದೀಪ್ ರಾಯ್ ಅವರಿಗೆ ಶನಿವಾರ ಮಧ್ಯರಾತ್ರಿ 1.45ರ ಸುಮಾರಿಗೆ ಹೃದಯಾಘಾತವಾಗಿದೆ. ಮೂಲತಃ ಮುಂಬೈಯವರಾದ ಅವರು ಸುಮಾರು 500ಕ್ಕೂ ಅಧಿಕ ಚಲನಚಿತ್ರಗಳಲ್ಲಿ ನಟಿಸಿದ್ದರು. ಶಂಕರ್ ನಾಗ್ ನಿರ್ದೇಶನದ 'ಮಿಂಚಿನ ಓಟ'ದಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿರುವುದು ಅವರ ಮೊದಲ ಚಿತ್ರ. ಆನಂತರ ದೇವರ ಆಟ, ಬಾಡದ ಹೂ, ನನ್ನವರು, ಅಂತಿಮ ಘಟ್ಟ, ಏಳು ಸುತ್ತಿನ ಕೋಟೆ, ಆಕಸ್ಮಿಕ, ಅಗ್ನಿ ಐಪಿಎಸ್, ಅಯ್ಯ, ಹಠವಾದಿ, ಸಿಕ್ಸರ್, ಆಪ್ತರಕ್ಷಕ, ಅಲೆಮಾರಿ, ಪರಾರಿ, ಅಮಾನುಷ, ಪುಷ್ಪಕ ವಿಮಾನ, ರಾಜಕುಮಾರ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಕನ್ನಡವೇ ಬಾರದಿದ್ದರೂ ಕನ್ನಡ ಕಲಿತು ಸಾಧನೆ ಮಾಡಿದ ಖ್ಯಾತಿ ಅವರದು.
9 ವರ್ಷ ವಯಸ್ಸಿನಲ್ಲೇ ರಂಗಭೂಮಿ ಕಡೆಗೆ ಹೆಜ್ಜೆ ಹಾಕಿದ್ದ ಅವರಿಗೆ ರಂಗಭೂಮಿಯಲ್ಲಿ ಶಂಕರ್ನಾಗ್ ಮತ್ತು ಅನಂತ್ ನಾಗ್ ಅವರ ಪರಿಚಯವಾಗಿತ್ತು. ಇದೇ ಪರಿಚಯ ಅವರನ್ನು ಸಿನಿಮಾ ರಂಗಕ್ಕೆ ಕರೆ ತಂದಿತ್ತು.
ಕಂಪ್ಯೂಟರ್ ಸೈನ್ಸ್, ಆಟೋಮೊಬೈಲ್ಸ್ ಎಂಜಿನಿಯರಿಂಗ್ ಪದವಿ ಪಡೆದಿದ್ದ ಅವರು ಐಬಿಎಂ, ಟಿಸಿಎಸ್ ಕಂಪೆನಿಗಳಲ್ಲಿಯೂ ಕೆಲಸ ಮಾಡಿದ್ದಾರೆ.