ಬೆಳಗಾವಿ, ಜ 29 (DaijiworldNews/DB): ಬೆಳಗಾವಿಯಲ್ಲಿ ಫೆಬ್ರವರಿ 1ರಿಂದ ಒಳ್ಳೆಯ ಬೆಳವಣಿಗೆ ಆಗುತ್ತದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಸದ್ಯ ಅವರ ಈ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.
ಅಮಿತ್ ಶಾ ಜೊತೆಗಿನ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಎಲ್ಲರೊಳಗೆ ಭಿನ್ನಾಭಿಪ್ರಾಯಗಳಿಲ್ಲ. ಕೆಲವೆಡೆ ಇರಬಹುದು. ಆದರೆ ಪಕ್ಷದ ವಿಚಾರ ಬಂದಾಗ ಎಲ್ಲರೂ ಕೂಡಿ ಕೆಲಸ ಮಾಡುತ್ತೇವೆ. ನಾಯಕರು ನೀಡಿದ ಟಾರ್ಗೆಟ್ ಸೀಟ್ ಗೆಲ್ಲಲ್ಲು ಶಕ್ತಿ ಮೀರಿ ಪ್ರಯತ್ನಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಪಕ್ಷದ ಪರ ಉತ್ತಮ ವಾತಾವರಣವಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಜಿಲ್ಲೆಗೆ ಆಗಮಿಸಿ ಸಭೆ ನಡೆಸಿರುವುದು ಜಿಲ್ಲೆಗೆ ಉತ್ತಮ ಬೆಳವಣಿಗೆ. ಇನ್ನು ಮಾಜಿ ಸಿಎಂ ಬಿಎಸ್ವೈ, ಪ್ರಹ್ಲಾದ್ ಜೋಶಿ, ಅರುಣ್ ಸಿಂಗ್ ಸೇರಿದಂತೆ ನಾಯಕರು ಹೆಚ್ಚಿನ ಸೀಟ್ ಗೆಲ್ಲುವ ದೃಷ್ಟಿಯಿಂದ ಮತ್ತು ಪಕ್ಷ ಸಂಘಟನೆ ಉದ್ದೇಶದಿಂದ ಕೆಲಸ ಮಾಡುವಂತೆ ಆದೇಶ ನೀಡಿದ್ದಾರೆ. ಪಕ್ಷಕ್ಕಾಗಿ ಸಂಘಟಿತರಾಗಿ ಎಲ್ಲರೂ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.
ಫೆಬ್ರವರಿ 1ರಿಂದ ಬೆಳಗಾವಿ ಜಿಲ್ಲೆಯಲ್ಲಿ ಒಳ್ಳೆಯ ಬೆಳವಣಿಗೆ ಆಗುತ್ತದೆ ಎಂದವರು ಇದೇ ವೇಳೆ ಹೇಳಿದ್ದು, ಆ ಒಳ್ಳೆಯ ಬೆಳವಣಿಗೆ ಏನು ಎಂಬುದನ್ನು ತಿಳಿಸಿಲ್ಲ. ಹೀಗಾಗಿ ಅವರ ಈ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.