ಅಹಮದಾಬಾದ್, ಜ 29 (DaijiworldNews/DB): ಜೂನಿಯರ್ ಕ್ಲರ್ಕ್ಗಳ ನೇಮಕಾತಿಗಾಗಿ ಗುಜರಾತ್ ಸರ್ಕಾರ ಭಾನುವಾರ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಯು ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ರದ್ದುಗೊಂಡಿದೆ. ಪ್ರಕರಣ ಸಂಬಂಧ ಶಂಕಿತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ ಪರೀಕ್ಷೆ ನಡೆಯಬೇಕಿತ್ತಾದರೂ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣದಿಂದ ನಿಗದಿತ ಸಮಯಕ್ಕೆ ಮೊದಲೇ ಪರೀಕ್ಷೆಯನ್ನು ರದ್ದುಗೊಳಿಸಲಾಯಿತು. ಇನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಆರೋಪದಲ್ಲಿ ಶಂಕಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ರಾಜ್ಯ ಪಂಚಾಯತ್ ಪರೀಕ್ಷಾ ಮಂಡಳಿ ತಿಳಿಸಿದೆ.
ರಾಜ್ಯದಾದ್ಯಂತ 2,995 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಬೇಕಿತ್ತು. 1,181 ಹುದ್ದೆಗಳ ಪರೀಕ್ಷೆಗೆ 9.5 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಶಂಕಿತನನ್ನು ವಿಚಾರಣೆ ನಡೆಸಲಾಗುತ್ತಿದೆ. ಅಭ್ಯರ್ಥಿಗಳಿಗೆ ಆಗಿರುವ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸುವುದಾಗಿ ಮಂಡಳಿ ತಿಳಿಸಿದೆ. ಶೀಘ್ರ ಹೊಸದಾಗಿ ಪರೀಕ್ಷೆ ನಡೆಸಲಾಗುವುದು. ಇದಕ್ಕಾಗಿ ಜಾಹೀರಾತನ್ನು ನೀಡಲಾಗುವುದು ಎಂದು ಹೇಳಿದೆ.
ಇನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷೆ ರದ್ದತಿ ಬಗ್ಗೆ ಗುಜರಾತ್ ಕಾಂಗ್ರೆಸ್ ವಕ್ತಾರ ಮನೀಶ್ ದೋಷಿ ಮಾತನಾಡಿ, ಕಳೆದ ಹನ್ನೆರಡು ವರ್ಷಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣಕ್ಕಾಗಿ ಹದಿನೈದು ಬಾರಿ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. ಸೂಕ್ತ ಕ್ರಮದ ಭರವಸೆಯನ್ನು ಸರ್ಕಾರ ನೀಡುತ್ತಿದೆಯೇ ಹೊರತು ಆರೋಪಿಗಳ ಬಂಧನ ನಡೆಯುತ್ತಿಲ್ಲ. ರಾಜ್ಯದ ಉದ್ಯೋಗಾಕಾಂಕ್ಷಿ ಯುವಜನರ ಜೀವನದಲ್ಲಿ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆಪಾದಿಸಿದ್ದಾರೆ. ಇನ್ನು ಗುಜರಾತ್ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಇಸುದಿನ್ ಗಧ್ವಿ ಕೂಡಾ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.