ಶ್ರೀನಗರ, ಜ 29 (DaijiworldNews/HR): ಭಾರತ್ ಜೋಡೊ ಯಾತ್ರೆಯು ಅಂತಿಮ ಹಂತ ತಲುಪಿದ್ದು, ಸಮಾರೋಪಕ್ಕೆ ಮುನ್ನಾದಿನವಾದ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಪಾದಯಾತ್ರೆಯು ಶ್ರೀನಗರದ ಪಂಥಾ ಚೌಕ್ನಿಂದ ಪ್ರಾರಂಭವಾಗಿದೆ.
ರಾಹುಲ್ ಗಾಂಧಿ ಅವರು, ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರ ಅವರೊಂದಿಗೆ ಬೆಳಗ್ಗೆ 10.45ಕ್ಕೆ ಯಾತ್ರೆ ಆರಂಭಿಸಿದ್ದು, ಅವರೊಂದಿಗೆ ಬೆಂಬಲಿಗರು, ಪಕ್ಷದ ಕಾರ್ಯಕರ್ತರು, ಮಹಿಳೆಯರು ಹೆಜ್ಜೆ ಹಾಕುತ್ತಿದ್ದಾರೆ.
ಇನ್ನು ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭವಾದ ಯಾತ್ರೆಯು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಗಿದ್ದು, ಜನವರಿ 30ರಂದು ಶ್ರೀನಗರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದರೊಂದಿಗೆ ಅಂತ್ಯಗೊಳ್ಳಲಿದೆ.