ಭುವನೇಶ್ವರ್, ಜ 29 (DaijiworldNews/HR): ಒಡಿಶಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ನಬಾ ಕಿಶೋರ್ ದಾಸ್ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಭಾನುವಾರದಂದು ಝಾರ್ಸುಗುಡಾ ಜಿಲ್ಲೆಯಲ್ಲಿ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೊಪಾಲ್ ದಾಸ್ ಅವರು ಈ ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ ನಾಲ್ಕೈದು ಗುಂಡುಗಳನ್ನು ಹಾರಿಸಿದರು ಎಂದು ತಿಳಿದುಬಂದಿದೆ.
ಇನ್ನು ಸಹಾಯಕ ಸಬ್ ಇನ್ಸ್ಪೆಕ್ಟರ್ ಗೋಪಾಲ್ ದಾಸ್ ಅವರು ತಮ್ಮ ರಿವಾಲ್ವರ್ನಿಂದ ಸಚಿವ ನಬಾ ದಾಸ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಸಚಿವರ ಮೇಲೆ ಎಎಸ್ಐ ಗುಂಡು ಹಾರಿಸಲು ನಿಖರವಾದ ಕಾರಣ ತಿಳಿದುಬಂದಿಲ್ಲ.
ಎಎಸ್ಐ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.