ನವದೆಹಲಿ, ಜ 29 (DaijiworldNews/DB): ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಖಲಿಸ್ತಾನಿ ಉಗ್ರರ ಸ್ಲೀಪರ್ ಸೆಲ್ಗಳ ಜಾಲಗಳು ಸಕ್ರಿಯವಾಗಿದೆ ಎಂದು ಗುಪ್ತಚರ ಸಂಸ್ಥೆಗಳ ಮೂಲಗಳು ತಿಳಿಸಿವೆ.
ದೆಹಲಿಯ ವಿವಿಧೆಡೆ ಬರೆಯಲಾಗಿದ್ದ ಖಲಿಸ್ತಾನಿ ಪರ ಘೋಷಣೆಗಳನ್ನು ಅಳಿಸುತ್ತಿರುವುದು
ರಾಷ್ಟ್ರ ರಾಜಧಾನಿಯಲ್ಲಿ ಖಲಿಸ್ತಾನಿ ಸ್ಲೀಪರ್ ಸೆಲ್ಗಳು ಸಕ್ರಿಯವಾಗಿದೆ. ಹೀಗಾಗಿ ಅಲ್ಲಿ ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ ಎಂದು ಸುದ್ದಿಸಂಸ್ಥೆಯೊಂದು ಗುಪ್ತಚರ ಸಂಸ್ಥೆಗಳ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಪಶ್ಚಿಮ ದೆಹಲಿಯ ವಿವಿಧೆಡೆ ಖಲಿಸ್ತಾನ್ ಪರ ಪೋಸ್ಟರ್, ಬರಹಗಳು ಕಾಣಿಸಿಕೊಂಡ ಕೆಲವೇ ದಿನಗಳ ಅಂತರದಲ್ಲಿ ಈ ಅಂಶ ಹೊರ ಬಿದ್ದಿದೆ. ಇನ್ನು ಈ ಬರಹಗಳು ಪಿತೂರಿ ಹಿನ್ನೆಲೆಯಲ್ಲೇ ಕಾಣಿಸಿಕೊಂಡಿರಬಹುದು ಎಂದೂ ಶಂಕಿಸಲಾಗಿದೆ.
ಸದ್ಯ ದೆಹಲಿಯ ವಿವಿಧೆಡೆ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದ್ದು, ಸಿಸಿಟಿವಿ ಕ್ಯಾಮರಾಗಳನ್ನು ನಿರಂತರ ಪರಿಶೀಲಿಸುವ ಕೆಲಸ ನಡೆಯುತ್ತಿದೆ.
ಪಶ್ಚಿಮ ದೆಹಲಿಯ ವಿವಿಧೆಡೆ ಕೆಲ ದಿನಗಳ ಹಿಂದೆ ಖಲಿಸ್ತಾನಿ ಪರ ಪೋಸ್ಟರ್, ಬರಹಗಳು ಕಾಣಿಸಿಕೊಂಡಿದ್ದವು. ಆದರೆ ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಅವುಗಳನ್ನು ಅಳಿಸಿ ಹಾಕಿದ್ದಾರೆ.ಭಾರತೀಯ ದಂಡ ಸಂಹಿತೆಯ (IPC) ಎರಡು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ (153-B) ಮತ್ತು ಕ್ರಿಮಿನಲ್ ಪಿತೂರಿ (120-B) ಸೆಕ್ಷನ್ಗಳ ಅಡಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಅಲ್ಲದೆ ಬರಹಗಳಿದ್ದ ಗೋಡೆಗಳಿಗೆ ಬಣ್ಣ ಬಳಿಯಲಾಗಿದೆ.