ನವದೆಹಲಿ, ಜ 29 (DaijiworldNews/DB): ಕಾಶ್ಮೀರಿ ಪಂಡಿತ ಸಮುದಾಯವನ್ನು ಕೇಂದ್ರ ಸರ್ಕಾರ ಕೇವಲ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆಯೇ ಹೊರತು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಗುತ್ತಿರುವ ಭಾರತ್ ಜೋಡೊ ಯಾತ್ರೆಯ ಸಂದರ್ಭದಲ್ಲಿ ಕಾಶ್ಮೀರಿ ಪಂಡಿತರೊಂದಿಗೆ ನಡೆಸಿದ ಸಂವಾದದ ವಿಡಿಯೊವನ್ನು ಭಾನುವಾರ ಟ್ವಿಟರ್ನಲ್ಲಿ ಹಂಚಿಕೊಂಡಿರುವ ಅವರು, ರಾಜಕೀಯವಾಗಿ ನಮ್ಮನ್ನು ಬಳಸಿಕೊಳ್ಳುತ್ತಿದ್ದೀರಿ. ಆದರೆ ನಮ್ಮ ಸುರಕ್ಷತೆಗಾಗಿ ಏನು ಮಾಡಿದ್ದೀರಿ ಎಂದು ಕಾಶ್ಮೀರಿ ಪಂಡಿತರು ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಅವರ ಈ ಪ್ರಶ್ನೆಗೆ ಉತ್ತರ ನಿಮ್ಮ ಬಳಿ ಇದೆಯೇ ಪ್ರಧಾನಿಯವರೇ ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ಕಾಶ್ಮೀರಿ ಪಂಡಿತರ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿಯಬೇಕು ಎಂಬ ಉದ್ದೇಶ ಬಿಜೆಪಿಯದ್ದು. ಹಿಂದಿನ ಮನಮೋಹನ್ ಸಿಂಗ್ ಸರ್ಕಾರದ ನಂತರ ನಮ್ಮ ಕಲ್ಯಾಣಕ್ಕಾಗಿ ಯಾವುದೇ ಕ್ರಮಗಳನ್ನು ಸರ್ಕಾರ ಜಾರಿಗೊಳಿಸಿಲ್ಲ ಎಂದು ಕಾಶ್ಮೀರಿ ಪಂಡಿತರು ಕೇಂದ್ರದ ವಿರುದ್ದ ಹೊರ ಹಾಕಿರುವ ಆಕ್ರೋಶವೂ ವಿಡಿಯೋದಲ್ಲಿ ದಾಖಲಾಗಿದೆ.