ಲಖನೌ, ಜ 29 (DaijiworldNews/DB): ಹೆಸರುಗಳನ್ನು ಬದಲಾವಣೆ ಮಾಡಿದರೆ ದೇಶದ ಮತ್ತು ಜನಸಾಮಾನ್ಯರ ಸಮಸ್ಯೆಗಳು ನಿವಾರಣೆಯಾಗುತ್ತವೆಯೇ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಪ್ರಶ್ನಿಸಿದ್ದಾರೆ.
ರಾಷ್ಟ್ರಪತಿ ಭವನದ ಪ್ರಸಿದ್ಧ ಮೊಘಲ್ ಉದ್ಯಾನವನ್ನು ಅಮೃತ್ ಉದ್ಯಾನ ಎಂದು ಮರುನಾಮಕರಣ ಮಾಡಿದ ಹಿನ್ನೆಲೆಯಲ್ಲಿ ಭಾನುವಾರ ಟ್ವೀಟ್ ಮಾಡಿರುವ ಅವರು, ದೇಶದ ಬಹುತೇಕ ಮಂದಿ ಹಣದುಬ್ಬರ, ಬಡತನ, ನಿರುದ್ಯೋಗ ಸೇರಿದಂತೆ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಇಂತಹ ಸಮಸ್ಯೆ ಪರಿಹಾರಕ್ಕೆ ಮುಂದಾಗುವ ಬದಲು ಮತಾಂತರ, ಮರು ನಾಮಕರಣ, ಬಹಿಷ್ಕಾರ, ದ್ವೇಷ ಭಾಷಣಗಳನ್ನು ಹರಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಇದು ದುರದೃಷ್ಟಕರ ಬೆಳವಣಿಗೆಯಾಗಿದೆ ಎಂದು ಕಿಡಿ ಕಾರಿದ್ದಾರೆ.
ಮೊಘಲ್ ಗಾರ್ಡನ್ನ್ನು ಅಮೃತ್ ಉದ್ಯಾನ ಎಂದು ಹೆಸರಿಟ್ಟಲ್ಲಿ ತೋರಿದ ಕಾಳಜಿಯನ್ನು ದೇಶದ ಸಮಸ್ಯೆ ನಿವಾರಣೆಗೆ ತೋರಿಸಬೇಕು. ಇಲ್ಲವಾದಲ್ಲಿ ಇದು ಕೇಂದ್ರ ಸರ್ಕಾರ ತನ್ನ ನ್ಯೂನತೆ ಮತ್ತು ವೈಫಲ್ಯ ಮುಚ್ಚಿಡಲು ನಡೆಸುವ ಪ್ರಯತ್ನ ಎಂದೇ ಸಾರ್ವಜನಿಕರು ಪರಿಗಣಿಸಬೇಕು ಎಂದವರು ಹೇಳಿದರು.
ವಸಾಹತುಶಾಹಿಯ ಸಂಕೇತವನ್ನು ತೊಡೆದುಹಾಕಲು ಉದ್ಯಾನವನದ ಮರು ನಾಮಕರಣ ಅಗತ್ಯವಿತ್ತು ಎಂದು ಬಿಜೆಪಿ ಪ್ರತಿಪಾದಿಸಿದರೆ, ಮೊದಲು ದೇಶದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿ ಎಂದು ವಿಪಕ್ಷಗಳು ಕೇಂದ್ರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿವೆ.