ನವದೆಹಲಿ, ಜ 30( DaijiworldNews/MS): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಐತಿಹಾಸಿಕ ಭಾರತ್ ಜೋಡೋ ಯಾತ್ರೆಗೆ ಇಂದು ಅಂತಿಮವಾಗಿ ತೆರೆ ಬೀಳಲಿದೆ. 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಚರಿಸಿ ಭಾನುವಾರ ಮುಕ್ತಾಯಗೊಂಡ ಕಾಂಗ್ರೆಸ್ನ ಬೃಹತ್ 'ಭಾರತ್ ಜೋಡೋ ಯಾತ್ರೆ'ಯ ಸಮಾರೋಪ ಸಮಾರಂಭ ಸೋಮವಾರ ಶ್ರೀನಗರದಲ್ಲಿ ನಡೆಯಲಿದೆ.
2022 ರ ಸೆ. 7 ರಂದು ಕನ್ಯಾಕುಮಾರಿಯಿಂದ ಯಾತ್ರೆ ಆರಂಭವಾಗಿ ಕಳೆದ 5 ತಿಂಗಳ (145 ದಿನ) ಕಾಲ ಸುಮಾರು 4 ಸಾವಿರ ಕಿ.ಮೀ.ಗೂ ಹೆಚ್ಚು ಕ್ರಮಿಸಿದ ಭಾರತ್ ಜೋಡೋ ಯಾತ್ರೆಯು ಭಾನುವಾರ ಶ್ರೀನಗರದ ಲಾಲ್ಚೌಕ್ನಲ್ಲಿ ಧ್ವಜಾರೋಹಣದೊಂದಿಗೆ ತೆರೆ ಕಂಡಿದೆ.
ಇಂದು ಶ್ರೀನಗರದ ಶೇರ್ ಇ ಕಾಶ್ಮೀರ್ ಕ್ರೀಡಾಂಗಣದಲ್ಲಿ ಬೃಹತ್ ರ್ಯಾಲಿ ಆಯೋಜಿಸಲಾಗಿದ್ದು, ಡಿಎಂಕೆ,ಆರ್ ಜೆಡಿ,ಸಿಪಿಎಂ, ಶಿವಸೇನೆ(ಉದ್ಬವ್ ಠಾಕ್ರೆ ಬಣ)ಜೆಡಿಯು, ಸಿಪಿಐ ಸೇರಿದಂತೆ ಸುಮಾರು ೧೨ ಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ. ಇಂದಿನ ವಿಪಕ್ಷಗಳ ಸದಸ್ಯರನ್ನು ಒಳಗೊಂಡ ಸಮಾವೇಶದ ಮೂಲಕ ಯಾತ್ರೆ ಯಶಸ್ವಿಯಾಗಿ ಸಮಾಪ್ತಿಯಾಗಲಿದೆ.
ನಡಿಗೆ ಮುಕ್ತಾಯ.. ಪ್ರಯಾಣ ಆರಂಭ.!
ರಾಹುಲ್ ಗಾಂಧಿಯ ಭದ್ರತೆ ಸೇರಿ ಹಲವು ಆತಂಕಗಳ ನಡುವೆಯೂ ಯಾತ್ರೆಗೆ ಸಾರ್ವಜನಿಕರಿಂದ ಮತ್ತು ಬಿಜೆಪಿಯೇತರ ವಿರೋಧ ಪಕ್ಷಗಳಿಂದ ಸಾಕಷ್ಟು ಬೆಂಬಲ ದೊರಕಿತ್ತು. ಪ್ರತಿ ರಾಜ್ಯದಲ್ಲಿ ಯಾತ್ರೆಗೆ ಜನರು ಸ್ಪಂದಿಸಿದ ರೀತಿ ಅದ್ಭುತವಾಗಿತ್ತು ಎಂದರೂ ತಪ್ಪಾಗಲಾರದು.
ಯಾತ್ರೆ ಪ್ರವೇಶಿದ ಪ್ರತಿಯೊಂದು ಸ್ಥಳಗಳಲ್ಲೂ , ರಾಹುಲ್ ಗಾಂಧಿ ಮಾತನಾಡಿ ಯಾತ್ರೆಯು ಬಿಜೆಪಿಯ "ದ್ವೇಷದ ರಾಜಕೀಯ" ವನ್ನು ಎದುರಿಸಲು ಮತ್ತು ಜಾತ್ಯತೀತ ಏಕತೆ ಮತ್ತು ಸಾಮಾಜಿಕ ನ್ಯಾಯದ ಅಗತ್ಯತೆಯ ಸಂದೇಶವನ್ನು ತಲುಪಿಸುವ ಗುರಿಯನ್ನು ಹೊಂದಿದೆ ಎಂದು ಹೈಲೈಟ್ ಮಾಡಿ ಹೇಳುವಲ್ಲಿ ಯಶಸ್ವಿಯಾದರು.
ಮಾತ್ರವಲ್ಲದೆ ದೇಶ ಆರ್ಥಿಕ ಹಿಂಜರಿಕೆಗೆ ಒಳಗಾಗಿದ್ದು, ಬೆಲೆ ಏರಿಕೆಯ ಪ್ರಸ್ತಾಪಿಸುವುದರ ಜೊತೆಗೆ "ಅದಾನಿ ಮತ್ತು ಅಂಬಾನಿಯಂತಹ ದೊಡ್ಡ ಬಂಡವಾಳಶಾಹಿಗಳಿಗೆ ಕೇಂದ್ರ ಸರ್ಕಾರದ ಕೃಪಾಕಟಾಕ್ಷದ ಬಗ್ಗೆ ಆರೋಪಿಸಿ " ಛೀಮಾರಿ ಹಾಕಿದರು. ಬಿಜೆಪಿ ನೇತೃತ್ವದ ಸರ್ಕಾರದ ಈ "ಪಕ್ಷಪಾತ ಧೋರಣೆ"ಯಿಂದಾಗಿ ಜನಸಾಮಾನ್ಯರು ಏರುತ್ತಲೇ ಇರುವ ಹಣದುಬ್ಬರದ ಆರ್ಥಿಕ ಹೊರೆ ಹೊರಬೇಕಾಯಿತು ಎಂದು ಅವರು ಪ್ರತಿಪಾದಿಸಿದರು.
ಒಟ್ಟಾರೆ ಭಾರತ್ ಜೋಡೋ ಯಾತ್ರೆಯು ಕಾಂಗ್ರೆಸ್ ಪಕ್ಷ ಸಂಘಟನೆಯ ಹಿತದೃಷ್ಟಿಯಿಂದ ಹಾಗೂ ರಾಹುಲ್ ಗಾಂಧಿಗೆ ಪಾದಯಾತ್ರೆ ಜನರ ನಾಡಿಮಿಡಿತ ಅರಿತುಕೊಳ್ಳಲು ಹಾಗೂ ಸಾರ್ವಜನಿಕ ಸಂವಾದದ ಒಂದೊಳ್ಳೆಯ ವೇದಿಕೆಯಾಗಿದ್ದು ಹೀಗಾಗಿ ಭಾರತ್ ಜೋಡೋ ಯಾತ್ರೆಯ ನಡಿಗೆ ಮುಕ್ತಾಯವಾದರೂ, ಹೊಸ ಉತ್ಸಾಹದೊಂದಿಗೆ ಕಾಂಗ್ರೆಸ್ ಪಕ್ಷದ ಮುಂದಿನ ಅಧ್ಯಾಯದ ಪ್ರಯಾಣ ಆರಂಭವಾಗಬೇಕಿದೆ.!