ಬೆಂಗಳೂರು, ಜ 30 (DaijiworldNews/HR): ಹವಾಮಾನ ವೈಪರೀತ್ಯದಿಂದಾಗಿ ದೆಹಲಿಯಿಂದ ಶ್ರೀನಗರಕ್ಕೆ ತೆರಳಬೇಕಿದ್ದ ಎಲ್ಲ ವಿಮಾನಗಳ ಹಾರಾಟ ರದ್ದಾಗಿರುವ ಹಿನ್ನೆಲೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಶ್ರೀನಗರ ಪ್ರವಾಸ ರದ್ದಾಗಿದೆ ಎಂದು ತಿಳಿದು ಬಂದಿದೆ.
ಬೆಳಗ್ಗೆ 09.15ರ ವಿಮಾನದಲ್ಲಿ ಸಿದ್ದರಾಮಯ್ಯ ಅವರು ಶ್ರೀನಗರಕ್ಕೆ ಪ್ರಯಾಣ ಬೆಳೆಸಬೇಕಿದ್ದು, ಇದಕ್ಕಾಗಿ ಅವರು ನಿನ್ನೆ ರಾತ್ರಿ ದೆಹಲಿಗೆ ಆಗಮಿಸಿದ್ದರು. ಆದರೆ ಹವಾಮಾನ ವೈಪರೀತ್ಯದಿಂದಾಗಿ ದೆಹಲಿ, ಶ್ರೀನಗರ ನಡುವಣ ಎಲ್ಲ ವಿಮಾನಗಳ ಹಾರಾಟ ರದ್ದಾಗಿದೆ.
ಇಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿರುವ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಸಿದ್ದರಾಮಯ್ಯ ಅವರು ಶ್ರೀನಗರಕ್ಕೆ ಪ್ರಯಾಣ ಬೆಳೆಸಬೇಕಿತ್ತು.
ಇನ್ನು ಈಗಾಗಲೇ ಶ್ರೀನಗರದಲ್ಲಿ ಡಿ.ಕೆ. ಶಿವಕುಮಾರ್ ಅವರು ಕಾಶ್ಮೀರದ ಹಿಮಪಾತ ಹಾಗೂ ಪ್ರಕೃತಿ ಸೌಂದರ್ಯಕ್ಕೆ ಮನಸೋತಿರುವ ವಿಡಿಯೋ ಮೂಲಕ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಭಾರತ ಜೋಡೋ ಯಾತ್ರೆ ಅಂತಿಮ ದಿನ ನಾವೆಲ್ಲ ಕಾಶ್ಮೀರದ ಶ್ರೀನಗರಕ್ಕೆ ಆಗಮಿಸಿದ್ದೇವೆ. ಯಾತ್ರೆ ರುವಾರಿ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಊಟ ಮುಗಿಸಿ ನಮ್ಮ ಕೊಣೆಗೆ ಬಂದು ಮಲಗುವಷ್ಟರಲ್ಲಿ ರಾತ್ರಿ 1 ಗಂಟೆ ಆಗಿತ್ತು. ರಾತ್ರಿ ಇಲ್ಲಿನ ಹವಾಮಾನ 9° ಸೆಲ್ಸಿಯಸ್ ಇತ್ತು. ಇಂದು ಬೆಳಗ್ಗೆ ಕೊಠಡಿಯ ಹೊರಗೆ ಬಂದು ನೋಡಿದಾಗ ನನ್ನ ಜೀವನದಲ್ಲಿ ಎಂದೂ ನೋಡಿರದ ಹಿಮಪಾತ ಹಾಗೂ ಅದರ ಸೌಂದರ್ಯ ಮನಸೂರೆಗೊಂಡಿದೆ. ಧಾರಾಕಾರ ಮಳೆಯಂತೆ ಹಿಮ ಸುರಿಯುತ್ತಿದೆ. ಹಿಂದೆಂದೂ ನಾನು ಈ ರೀತಿಯ ಅದ್ಭುತ ದೃಶ್ಯ ಕಂಡಿರಲಿಲ್ಲ. ನಾನು ಈ ಹಿಂದೆ ಸ್ವಿಜರ್ಲೆಂಡ್ ಮತ್ತಿತರ ದೇಶಗಳಿಗೆ ಭೇಟಿ ನೀಡಿದ್ದೇನೆ. ಆದರೆ ಇಂದು ನನಗೆ ಆಗಿರುವ ಪ್ರಕೃತಿ ಸೌಂದರ್ಯದ ಅನುಭವ ಹಿಂದೆಂದೂ ಆಗಿರಲಿಲ್ಲ. ಇದನ್ನು ಮರೆಯಲು ಸಾಧ್ಯವಿಲ್ಲ’ ಎಂದು ಶಿವಕುಮಾರ್ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.