ಬೆಂಗಳೂರು ಜ 30( DaijiworldNews/MS): "ರಾಜ್ಯದಲ್ಲಿ ಮಾತ್ರವಲ್ಲ, ನನ್ನ ಬಳಿ ದುಬೈ ಹಾಗೂ ಲಂಡನ್ ನಲ್ಲಿ ಮನೆ ಇದ್ದು ಸಾವಿರಾರು ಕೋಟಿ ಆಸ್ತಿ ನನ್ನಲಿವೆ" ಎಂದು ಡಿ.ಕೆ.ಶಿವಕುಮಾರ್ ಮಾತನಾಡಿರುವ ಆಡಿಯೋ ಸೇರಿ ನನ್ನ ಬಳಿ 128 ಸಾಕ್ಷ್ಯಗಳಿವೆ, ಯಾವುದನ್ನೂ ಬಿಡುಗಡೆ ಮಾಡಲ್ಲ, ಎಲ್ಲವನ್ನೂ ಸಿಬಿಐ ತನಿಖೆಗೆ ವಹಿಸುವಂತೆ ಕೇಳುತ್ತೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿ ಖಾಸಗಿಯಲ್ಲಿ ನಡೆದ ಮಹತ್ವದ ಸುದ್ದಿಗೋಷ್ಠಿಯಲ್ಲಿ ಇಂದು ಡಿಕೆ ಶಿವಕುಮಾರ್, ಅವರ ವಿರುದ್ದ ಹರಿಹಾಯ್ದು, ಡಿಕೆಶಿ ರಾಜಕೀಯದಲ್ಲಿ ಇರಲು ನಾಲಾಯಕ್ಕು, ನನ್ನ ಮೇಲೆ ವೈಯಕ್ತಿಕ ದ್ವೇಷ ಸಾಧಿಸಲಾಗಿದೆ. ಡಿಕೆಶಿ - ನಾನು ಅಣ್ಣ ತಮ್ಮಂದಿರಂತೆ ಇದ್ದು, ಕಾಂಗ್ರೆಸ್ ಪಕ್ಷದ ’ವಿಷಕನ್ಯೆ ’ಯೇ ಇದಕ್ಕೆಲ್ಲಾ ಕಾರಣ ಎಂದು ಆರೋಪಿಸಿದ್ದಾರೆ.
ನನ್ನ ಮೇಲೆ ಷಡ್ಯಂತ್ರ ಮಾಡಿ, ಷಂಡರಂತೆ ಆತ ರಾಜಕೀಯ ಮಾಡಿದ್ದಾನೆ. ಆತನನ್ನು ಪೂರ್ಣಪ್ರಮಾಣದಲ್ಲಿ ಮನೆಗೆ ಕಳುಹಿಸುವವರೆಗೂ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲ್ಲ . ನಾನು ಸಹಕಾರ ಸಚಿವನಾಗಿದ್ದಾಗ ಕೋ ಆಪರೇಟಿವ್ ಬ್ಯಾಂಕಿನ ಫೈಲ್ ಕ್ಲಿಯರ್ ಮಾಡಿ ಎಂದು ಡಿಕೆಶಿ ಬೆನ್ನುಬಿದ್ದಿದ್ದು, ನಾನು ಫೈಲ್ ಕ್ಲಿಯರ್ ಮಾಡಲಿಲ್ಲವೋ ಅಂದಿನಿಂದ ದ್ವೇಷ ಸಾಧಿಸಲು ಆರಂಭಿಸಿದ್ದಾರೆ. ಡಿಕೆ ಶಿವಕುಮಾರ್ ಸಿಡಿ ಬಿಡುಗಡೆ ಮಾಡಿ, ಒಬ್ಬ ಮಹಿಳೆ ಮೂಲಕ ತೇಜೋವಧೆ ಮಾಡಿ, ನನ್ನ ವೈಯಕ್ತಿಕ ಜೀವನ ಹಾಳುಮಾಡಿದ. ಸಿಡಿ ಪ್ರಕರಣದ ಯುವತಿ, ನರೇಶ್ ಸೇರಿದಂತೆ 6 ಜನರನ್ನು ಬಂಧಿಸಿದರೆ ಎಲ್ಲಾ ಸತ್ಯ ಹೊರಬೀಳುತ್ತದೆ ಎಂದಿದ್ದಾರೆ
ಪ್ರಕರಣದ ತನಿಖೆ ಸಿಬಿಐಗೆ ವಹಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವೆ. ಎಲ್ಲಾ ದಾಖಲೆಗಳನ್ನು ಸಿಬಿಐಗೆ ವಹಿಸುತ್ತೇನೆ ಎಂದು ಹೇಳಿದ್ದಾರೆ.