ಉತ್ತರ ಪ್ರದೇಶ, ಜ 30 (DaijiworldNews/HR): ಅಣ್ಣನೊಂದಿಗಿನ ದ್ವೇಷದ ಹಿನ್ನೆಲೆಯಲ್ಲಿ ನಾಲ್ಕು ವರ್ಷದ ಅಪ್ರಾಪ್ತ ಬಾಲಕನನ್ನು ಕತ್ತು ಹಿಸುಕಿ ಕೊಂದು ಶವವನ್ನು ಥರ್ಮಾಕೋಲ್ ಬಾಕ್ಸ್ನಲ್ಲಿ ಹಾಕಿ ಎಸೆದಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಬೆಳಕಿಗೆ ಬಂದಿದೆ.
ಮೃತ ಬಾಲಕನನ್ನು ಅಬು ಇಸ್ಮಾಯಿಲ್ ಎಂದು ಗುರುತಿಸಲಾಗಿದೆ.
ದೋಷಿಪುರ ನಿವಾಸಿ ನೇಕಾರ ಮೊಹಮ್ಮದ್ ಜುನೈದ್ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಕಿರಿಯ ಮಗ ನಾಲ್ಕೂವರೆ ವರ್ಷದ ಅಬು ಇಸ್ಮಾಯಿಲ್ ಶನಿವಾರ ಸಂಜೆಯಿಂದ ನಾಪತ್ತೆಯಾಗಿದ್ದ. ಮನೆಯಿಂದ ಚಿಪ್ಸ್ ಖರೀದಿಸಲು ಹೋಗಿದ್ದ ಆತ ವಾಪಸ್ ಬಂದಿರಲಿಲ್ಲ. ರಾತ್ರಿಯಿಂದಲೇ ಕುಟುಂಬಸ್ಥರು ಹುಡುಕಾಟದಲ್ಲಿ ತೊಡಗಿದ್ದರು. ಜೈತ್ಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವೂ ದಾಖಲಿಸಲಾಗಿತ್ತು.
ಇನ್ನು ದೂರಿನ ಮೇರೆಗೆ ಸಮೀಪದ ಪ್ರದೇಶಗಳ ಸಿಸಿಕ್ಯಾಮೆರಾ ಪರಿಶೀಲಿಸಿದಾಗ ಇಸ್ಮಾಯಿಲ್ನನ್ನು ದೋಷಿಪುರ ನಿವಾಸಿ ಶಾಹಿದ್ ಜಮಾಲ್ (20) ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ನಂತರ ಪೊಲೀಸರು ಜಮಾಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಪ್ರಾಥಮಿಕ ತನಿಖೆಯ ವೇಳೆ ಮೃತ ಅಬು ಇಸ್ಮಾಯಿಲ್ ನನ್ನು ಮೊದಲು ಅಪಹರಿಸಿ ನಂತರ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಮೃತ ಬಾಲಕನ ಅಣ್ಣನೊಂದಿಗೆ ಆರೋಪಿ ಜಮಾಲ್ ಕೆಲವು ವಿವಾದಗಳನ್ನು ಹೊಂದಿದ್ದು, ಈ ದ್ವೇಷದ ಹಿನ್ನೆಲೆ ಬಾಲಕನನ್ನು ಕೊಲೆ ಮಾಡಿರುವುದಾಗಿ ಆರೋಪಿ ಹೇಳಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.