ಬೆಂಗಳೂರು, ಜ 30( DaijiworldNews/MS): ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಗೂ ಅಧಿಕೃತ ಸ್ಥಾನಮಾನ ದೊರೆಯಬೇಕು ಎಂಬುವುದು ಕರಾವಳಿ ಜನರ ಹಲವು ವರ್ಷಗಳ ಒತ್ತಾಯ. ಹೀಗಾಗಿ ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವುದಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ವರದಿ ನೀಡುವಂತೆ ಡಾ| ಮೋಹನ್ ಆಳ್ವ ನೇತೃತ್ವದ ಸಮಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ.
ಡಾ| ಮೋಹನ್ ಆಳ್ವ,ಗಣೇಶ್ ಸಂಕಮಾರೆ, ಚಂದ್ರಹಾಸ ಕಣಂತೂರು
ಡಾ| ಮೋಹನ್ ಆಳ್ವ ನೇತೃತ್ವದಲ್ಲಿ , ಕೇಶವ ಬಂಗೇರಾ, ಡಾ| ಮಾಧವ ಕೊಣಾಜೆ, ಗಣೇಶ್ ಅಮೀನ್ ಸಂಕಮಾರೆ , ಪ್ರಥ್ವಿ ಕವತರ್ ಮಣಿಪಾಲ , ವಸಂತ್ ಶೆಟ್ಟಿ ಉಡುಪಿ, ಚಂದ್ರಹಾಸ ಕಣಂತೂರು (ಲೇಖಕರು, ಕಥೆಗಾರರು), ಸಂಧ್ಯಾ ಆಳ್ವಾ (ಶಿಕ್ಷಕರು, ಸಂತ ಅಲೋಶಿಯಲ್ ಪ್ರೌಢ ಶಾಲೆ) ಸದಸ್ಯರಾಗಿರಲಿದ್ದು ಇವರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಸಮಿತಿಯಲ್ಲಿರಲಿದ್ದಾರೆ.
ಸರ್ಕಾರಕ್ಕೆ ತುಳು ಭಾಷೆಗೂ ಅಧಿಕೃತ ಸ್ಥಾನಮಾನ ನೀಡುವಂತೆ ಈಗಾಗಲೇ ಹಲವಾರು ಸಂಸ್ಥೆ - ಸಾರ್ವಜನಿಕರಿಂದ ಮನವಿ ಸಲ್ಲಿಕೆಯಾಗಿತ್ತು. ಅಲ್ಲದೆ ಹಲವು ಬಾರಿ ಟ್ವಿಟರ್ ಅಭಿಯಾನವನ್ನು ನಡೆಸಲಾಗಿತ್ತು. ಈ ಹಿನ್ನಲೆ ಹಾಲಿ ಇರುವ ನಿಯಮ ಮತ್ತು ಕಾನೂನಿನ ಚೌಕಟ್ಟಿನಲ್ಲಿ ತಜ್ಞರ ಸಮಿತಿ ರಚಿಸಿ ವಾಸ್ತವಾಂಶ ವರದಿಯನ್ನು ಸೂಕ್ತ ಶಿಪಾರಸ್ಸಿನೊಂದಿಗೆ ಸಲ್ಲಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ರಾಜ್ಯ ಸರ್ಕಾರ ನಿರ್ದೇಶನ ನೀಡಿತ್ತು. ಹೀಗಾಗಿ ಸಭೆ ನಡೆಸಿ ಸಮಿತಿ ರಚಿಸಲಾಗಿದೆ.
ಈ ಸಮಿತಿಯೂ ವಾರದೊಳಗೆ ವರದಿ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಆರ್ ರಮೇಶ್ ಆದೇಶಿಸಿದ್ದಾರೆ.