ಶ್ರೀನಗರ, ಜ 30 (DaijiworldNews/SM): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ. ಒಂದೊಮ್ಮೆ ಜಮ್ಮು ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದ್ದರೆ, ಅಮಿತ್ ಶಾ ಅವರು ಅಲ್ಲಿ ಪಾದಯಾತ್ರೆ ಮಾಡಲಿ ಎಂದು ಸವಾಲೆಸೆದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇದೆ ಎನ್ನುವುದಾದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮುವಿನಿಂದ ಶ್ರೀನಗರದ ಲಾಲ್ ಚೌಕ್ ವರೆಗೆ ಪಾದಯಾತ್ರೆ ಮಾಡಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಸವಾಲು ಹಾಕಿದ್ದಾರೆ.
ಇಂದು ಶ್ರೀನಗರದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕಾಶ್ಮೀರದ ಬೀದಿಗಳಲ್ಲಿ ನಡೆಯಲು ಯಾವುದೇ ಬಿಜೆಪಿ ನಾಯಕರಿಗೂ ಸಾಧ್ಯವಿಲ್ಲ. ಏಕೆಂದರೆ ಅವರಿಗೆ ಭಯ ಇದೆ ಎಂದಿದ್ದಾರೆ.
ಕೇಂದ್ರಾಡಳಿತ ಪ್ರದೇಶದಲ್ಲಿ ಪರಿಸ್ಥಿತಿ ಉತ್ತಮವಾಗಿದ್ದರೆ ಅಮಿತ್ ಶಾ ಮತ್ತು ಇತರ ಬಿಜೆಪಿ ನಾಯಕರ ಜಮ್ಮುವಿನಿಂದ ಲಾಲ್ ಚೌಕ್ವರೆಗೆ ಪಾದಯಾತ್ರೆ ಕೈಗೊಳ್ಳಲಿ ಎಂದು ರಾಹುಲ್ ಗಾಂಧಿ ಸವಾಲು ಹಾಕಿದರು.
"ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ದೇಶಿತ ಹತ್ಯೆಗಳು ಮತ್ತು ಬಾಂಬ್ ಸ್ಫೋಟಗಳು ನಡೆಯುತ್ತಿವೆ. ಜನ ನಿತ್ಯವೂ ಭಯದಲ್ಲಿ ಜೀವನ ಮಾಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಸರಿ ಇಲ್ಲ. ನಮ್ಮ ಯಾತ್ರೆಗೆ ಸೂಕ್ತ ಭದ್ರತೆ ನೀಡಲಿಲ್ಲ ಎಂದು ನಾವು ಹೇಳಿದರೆ, ಬಿಜೆಪಿಯವರು ಆಧಾರರಹಿತ ಆರೋಪ ಎನ್ನುತ್ತಾರೆ. ಆದರೆ ಕಣಿವೆಯಲ್ಲಿ ಒಬ್ಬ ಬಿಜೆಪಿ ನಾಯಕನೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ ಏಕೆ ಎಂದು ಪ್ರಶ್ನಿಸಿದರು.