ಗಾಂಧಿನಗರ, ಜ 30 (DaijiworldNews/SM): 2013ರಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಜೀವಾವಧಿ ಶಿಕ್ಷೆಯಲ್ಲಿದ್ದಾರೆ. ಇದೀಗ ಅಸಾರಾಂ ಬಾಪು ದೋಷಿ ಎಂದು ಗಾಂಧಿನಗರ ಸೆಷನ್ಸ್ ಕೋರ್ಟ್ ಇಂದು ತೀರ್ಪು ನೀಡಿದೆ.
ಅಪ್ರಾಪ್ತ ಬಾಲಕಿಯೊಬ್ಬಳು ರಾಜಸ್ಥಾನದ ಆಶ್ರಮದಲ್ಲಿ ಅಸಾರಾಂ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು 2013ರಲ್ಲಿ ಆರೋಪಿಸಿದ್ದಳು. ಈ ದೂರಿನ ಆಧಾರದಲ್ಲಿ ಆತನನ್ನು 2013ರ ಆಗಸ್ಟ್ 31ರಂದು ಬಂಧಿಸಲಾಗಿತ್ತು. ಆಗಿನಿಂದ ಅಸಾರಾಂ ಬಾಪು ಸೆರೆವಾಸದಲ್ಲಿದ್ದಾನೆ.
ಅಸಾರಾಂ ಬಾಪು ಸೇರಿದಂತೆ 7 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾದ ಈ ಪ್ರಕರಣದಲ್ಲಿ 68 ಜನರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಈ ಹಿಂದೆ 8 ಜನರನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಪ್ರಸ್ತುತ ಜೋಧ್ಪುರ ಜೈಲಿನಲ್ಲಿರುವ ಅಸಾರಾಂ ಬಾಪು ವರ್ಚುವಲ್ ಆಗಿ ವಿಚಾರಣೆಗೆ ಹಾಜರಾಗಿದ್ದರು.
2018ರಲ್ಲಿ ಜೋಧ್ಪುರ ನ್ಯಾಯಾಲಯವು ನಗರದ ತನ್ನ ಆಶ್ರಮದಲ್ಲಿ 16 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಅಸಾರಾಂ ಬಾಪುವನ್ನು ತಪ್ಪಿತಸ್ಥನೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. 77 ವರ್ಷದ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಸೇರಿ ನಾಲ್ವರು ಆರೋಪಿಗಳನ್ನು ದೋಷಿ ಎಂದು ಘೋಷಿಸಲಾಗಿತ್ತು.