ಚೆನ್ನೈ, ಜ 31 (DaijiworldNews/HR): ಕಳೆದ 80 ವರ್ಷಗಳಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ನಿರ್ಬಂಧವಿದ್ದ ತಮಿಳುನಾಡಿನ ತಿರುವಣ್ಣಾ ಮಲೈ ಜಿಲ್ಲೆಯಲ್ಲಿರುವ ದೇಗುಲಕ್ಕೆ ಇದೀಗ ಎಸ್ಸಿ/ಎಸ್ಟಿ ವರ್ಗದ 200ಕ್ಕೂ ಹೆಚ್ಚು ಮಂದಿ ಪ್ರವೇಶಿಸಿದ್ದಾರೆ.
80 ವರ್ಷಗಳ ಇತಿಹಾಸ ಹೊಂದಿರುವ ದೇವಿ ದೇಗುಲವೊಂದಕ್ಕೆ ದಲಿತರು ಪ್ರವೇಶಿಸದಂತೆ ಮೊದಲಿನಿಂದಲೂ ನಿರ್ಬಂಧವಿದ್ದು, ಈ ವಿಚಾರ ಜಿಲ್ಲಾಡಳಿತದ ಗಮನಕ್ಕೆ ಬಂದ ಬಳಿಕ, ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯ ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ದೇಗುಲ ಆಡಳಿತ ಮಂಡಳಿ ಜತೆಗೆ ಸಭೆ ನಡೆಸಲಾಯಿತು.
ಇನ್ನು ಜ.30ರ ಹುತಾತ್ಮರ ದಿನಾಚರಣೆಯಲ್ಲಿ ಜಿಲ್ಲೆಯಲ್ಲಿ ಅಸ್ಪೃಶ್ಯತೆ ತೊಲಗಿಸುವ ಸಂಕಲ್ಪದೊಂದಿಗೆ 400 ಪೊಲೀಸರ ಭದ್ರತೆಯೊಂದಿಗೆ ದಲಿತರ ದೇಗುಲ ಪ್ರವೇಶವನ್ನು ಖಾತರಿ ಪಡಿಸಿಕೊಂಡಿದ್ದಾರೆ.
ದೇಗುಲ ಪ್ರವೇಶಿಸಿದ ದಲಿತ ಮಹಿಳೆಯೊಬ್ಬರು,ತಾನು ಇಲ್ಲಿಯೇ ಹುಟ್ಟಿ ಬೆಳೆದಿದ್ದರೂ, ದೇಗುಲದ ಒಳಗಿರುವ ದೇವಿಯ ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ.ಇಂದು ಆ ಅವಕಾಶ ಸಿಕ್ಕಿದೆ. ದೇಗುಲ ಪ್ರವೇಶಿಸಿರುವುದು ನಾನು ಮಗುವಿಗೆ ಜನ್ಮ ನೀಡಿದಷ್ಟು ಸಂತೋಷ ತಂದಿದೆ ಎಂದಿದ್ದಾರೆ.