ರಾಯಚೂರು, ಜ 31 (DaijiworldNews/DB): ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳಿಂದ ತಮ್ಮ ಕ್ಷೇತ್ರದಲ್ಲೇ ಸ್ಪರ್ಧಿಸಿ ಎಂಬ ಮನವಿಗಳು ಬರುತ್ತಿವೆ. ಈ ನಡುವೆ ಸ್ಪರ್ಧೆ ಮಾಡಿದರೆ ವಿವಿಧ ಆಫರ್ಗಳನ್ನೂ ಅಭಿಮಾನಿಗಳು ಪ್ರಕಟಿಸುತ್ತಿದ್ದಾರೆ.
ಇತ್ತೀಚೆಗೆ ಯಾದಗಿರಿಯಿಂದ ಸ್ಪರ್ಧಿಸಿದರೆ ಒಂದು ಕೋಟಿ ರೂ. ಬಹುಮಾನ ನೀಡುವುದಾಗಿ ಅಭಿಮಾನಿಯೊಬ್ಬ ಘೋಷಿಸಿದ ಬೆನ್ನಲ್ಲೇ, ಇನ್ನೊಬ್ಬ ಅಭಿಮಾನಿಯೂ ಆಫರ್ ಘೋಷಣೆ ಮಾಡಿದ್ದಾರೆ. ರಾಯಚೂರಿನಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ ಎರಡು ಎಕರೆ ಜಮೀನು ಮಾರಿ ಹಣ ನೀಡುವ ಭರವಸೆ ಈ ಅಭಿಮಾನಿ ಕಡೆಯಿಂದ ಬಂದಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ಅಥವಾ ರಾಯಚೂರು ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಬೇಕೆಂದು ಜಿಲ್ಲೆಯ ರೈತ ಹಾಗೂ ಗ್ರಾಮ ಪಂಚಾಯತ್ ಸದಸ್ಯ, ಲಿಂಗಸೂಗೂರು ತಾಲೂಕಿನ ಚಿಕ್ಕಹೊಸರೂರು ಗ್ರಾಮದ ಶರಣು ಕಡ್ಡೋಣಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದಾರೆ. ಒಂದು ವೇಳೆ ಈ ಎರಡರ ಪೈಕಿ ಒಂದು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧಿಸಿದ್ದೇ ಆದಲ್ಲಿ ತನ್ನ ಎರಡು ಎಕರೆ ಜಮೀನು ಮಾರಾಟ ಮಾಡಿ ಚುನಾವಣಾ ಖರ್ಚಿಗೆ ಹಣ ನೀಡುವುದಾಗಿ ಅವರು ಹೇಳಿಕೊಂಡಿದ್ದಾರೆ.
ಕೋಲಾರದಲ್ಲಿಯೇ ಸ್ಪರ್ಧೆ ಮಾಡುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದರೂ, ಅವರು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆಂಬುದು ಇನ್ನೂ ಖಚಿತಗೊಂಡಿಲ್ಲ. ಏಕೆಂದರೆ ಕ್ಷೇತ್ರ ಅಧಿಕೃತಗೊಳ್ಳಲು ಹೈಕಮಾಂಡ್ ಅಂತಿಮ ಮುದ್ರೆಯೊತ್ತುವುದು ಬಾಕಿ ಇರುವುದರಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಮೇಲಷ್ಟೇ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆಂಬುದು ಸ್ಪಷ್ಟವಾಗಲಿದೆ. ಈ ನಡುವೆ ಸಿದ್ದರಾಮಯ್ಯನವರಿಗೆ ತಮ್ಮ ಕ್ಷೇತ್ರದಲ್ಲೇ ಸ್ಪರ್ಧಿಸಬೇಕೆಂಬ ಆಫರ್ಗಳು ಅಭಿಮಾನಿಗಳ ಕಡೆಯಿಂದ ಬರುತ್ತಿವೆ. ಇತ್ತೀಚೆಗಷ್ಟೇ ಯಾದಗಿರಿ ಕ್ಷೇತೃದಿಂದ ಸ್ಫರ್ಧೆ ಮಾಡಿದರೆ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಮಾಜಿ ತಾಪಂ ಸದಸ್ಯ ಚಂದ್ರಯ್ಯಾ ನಾಗರಾಳ ಹೇಳಿಕೊಂಡಿದ್ದರು.