ನವದೆಹಲಿ, ಜ 31( DaijiworldNews/MS): ಜಾಗತಿಕವಾಗಿ ಕಾಡುತ್ತಿರುವ ಆರ್ಥಿಕ ಅನಿಶ್ಚಿತತೆಯ ನಡುವೆ ಭಾರತ ಮಂಡಿಸುತ್ತಿರುವ ಬಜೆಟ್ ಮೇಲೆ ವಿಶ್ವದ ಚಿತ್ತ ನೆಟ್ಟಿದೆ ಎಂದು ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
"ಅಧ್ಯಕ್ಷೆ ದ್ರೌಪದಿ ಮುರ್ಮು ಅವರು ಮೊದಲ ಬಾರಿಗೆ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಇದು ಬುಡಕಟ್ಟು ಸಮಾಜಕ್ಕೆ ಹೆಮ್ಮೆಯ ದಿನವಾಗಿದೆ. ನಮ್ಮ ವಿತ್ತ ಸಚಿವರು ಮಹಿಳೆಯಾಗಿದ್ದಾರೆ. ನಾಳೆ ಅವರು ದೇಶದ ಮುಂದೆ ಮತ್ತೊಂದು ಬಜೆಟ್ ಮಂಡಿಸಲಿದ್ದಾರೆ. ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಭಾರತದ ಬಜೆಟ್ನತ್ತ ನೋಡುತ್ತಿದೆ. ಅಸ್ಥಿರ ಜಾಗತಿಕ ಆರ್ಥಿಕ ಪರಿಸ್ಥಿತಿಯ ನಡುವೆ, ಭಾರತದ ಬಜೆಟ್ ಸಾಮಾನ್ಯ ನಾಗರಿಕರ ಭರವಸೆ ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಪ್ರಯತ್ನಿಸುತ್ತದೆ ಜಗತ್ತು ನೋಡುತ್ತಿರುವ ಭರವಸೆಯ ಕಿರಣವು ಪ್ರಕಾಶಮಾನವಾಗಿ ಬೆಳಗುತ್ತದೆ. ಇದಕ್ಕಾಗಿ ನಿರ್ಮಲಾ ಸೀತಾರಾಮನ್ ಆ ಆಶಯಗಳನ್ನು ಪೂರೈಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ ಎಂದು ನಾನು ದೃಢವಾಗಿ ನಂಬುತ್ತೇನೆ" ಎಂದು ಹೇಳಿದ್ದಾರೆ
'ಭಾರತ ಹಾಗೂ ಪ್ರಜೆ ಮೊದಲು' ಎಂಬ ಚಿಂತನೆಯನ್ನು ತೆಗೆದುಕೊಂಡು ನಾವು ಸಂಸತ್ತಿನ ಈ ಬಜೆಟ್ ಅಧಿವೇಶನವನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ. ವಿರೋಧ ಪಕ್ಷದ ನಾಯಕರು ಸಂಸತ್ತಿನ ಮುಂದೆ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾರೆ ಎಂಬ ಭರವಸೆ ನನಗಿದೆ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ