ನವದೆಹಲಿ, ಜ 31 (DaijiworldNews/DB): ರಾಜಕೀಯ ಅಸ್ಥಿರತೆ ಇರುವ ದೇಶಗಳು ಭಾರೀ ಬಿಕ್ಕಟ್ಟು ಎದುರಿಸುತ್ತಿವೆ. ವಿಶ್ವದ ಹಲವು ರಾಷ್ಟ್ರಗಳು ಭಾರತದ ನೆರವು ಯಾಚಿಸುತ್ತಿವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
ಸಂಸತ್ತಿನ ಎರಡು ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, ನಮ್ಮ ಸರ್ಕಾರವು ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಂಡ ದೃಢ ನಿರ್ಧಾರಗಳಿಂದಾಗಿ ಇತರ ದೇಶಗಳಿಗಿಂತ ನಮ್ಮ ದೇಶ ಉತ್ತಮ ಸ್ಥಾನದಲ್ಲಿದೆ. ಆದರೆ ಕೆಲವು ದೇಶಗಳಲ್ಲಿ ರಾಜಕೀಯ ಅಸ್ಥಿರತೆ ಇರುವುದರಿಂದ ಅವುಗಳು ಭಾರೀ ಬಿಕ್ಕಟ್ಟಿನಿಂದ ನಲುಗುತ್ತಿವೆ. ಭಾರತದ ನೆರವು ಯಾಚಿಸಿ ಆ ಬಿಕ್ಕಟ್ಟು ಶಮನ ಮಾಡುವುದಕ್ಕೆ ಕೆಲವು ದೇಶಗಳು ಪ್ರಯತ್ನ ನಡೆಸುತ್ತಿವೆ ಎಂದರು.
ಜಮ್ಮು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದತಿ, ತ್ರಿವಳಿ ತಲಾಕ್ ರದ್ದು ಸೇರಿದಂತೆ ನಮ್ಮ ಸರ್ಕಾರ ಕೈಗೊಂಡಿರುವ ನಿರ್ಧಾರಗಳು ಅತ್ಯುತ್ತಮವಾಗಿವೆ. ದೇಶದ ಆತ್ಮಸ್ಥೈರ್ಯ ತುಂಬಾ ದೊಡ್ಡದು. ಹೀಗಾಗಿಯೇ ಇಡೀ ಜಗತ್ತು ಭಾರತದತ್ತ ತಿರುಗಿ ನೋಡುತ್ತಿದೆ ಎಂದವರು ಅಭಿಪ್ರಾಯಪಟ್ಟರು.
ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ನೀಡುವ ಶಕ್ತಿ ಭಾರತಕ್ಕಿದೆ. ಸ್ಥಿರ, ನಿರ್ಭೀತ, ನಿರ್ಣಾಯಕ ಸರ್ಕಾರ ದೇಶದಲ್ಲಿರುವುದರಿಂದ ಇದೆಲ್ಲವೂ ಸಾಧ್ಯವಾಗಿದೆ. 2047ರ ಹೊತ್ತಿಗೆ ನಾವು ಇತಿಹಾಸದ ಹೆಮ್ಮೆಯನ್ನು ಇನ್ನಷ್ಟು ವೃದ್ದಿಸಿಕೊಂಡು ಸದೃಢ ರಾಷ್ಟ್ರ ನಿರ್ಮಿಸಬೇಕು. ಬಡತನವಿಲ್ಲದ, ಮಧ್ಯಮ ವರ್ಗದವರೂ ಸ್ಥಿತಿವಂತರಾಗಿ ಬಾಳುವ ರಾಷ್ಟ್ರ ನಮ್ಮದಾಗಬೇಕು. ದೇಶದ ಯುವಕರು, ಮಹಿಳೆಯರು ಸಮಾಜ, ದೇಶಕ್ಕೆ ಸದೃಢತೆಯ ಹಾದಿ ತೋರಲು ಪ್ರಮುಖ ಪಾತ್ರ ವಹಿಸಿ ಆ ಮೂಲಕ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಶ್ರಮಿಸಬೇಕು ಎಂದು ಅವರು ಪ್ರತಿಪಾದಿಸಿದರು.