ಮುಂಬೈ, ಜ 31 (DaijiworldNews/DB): ದೆಹಲಿ ಜೆಎನ್ಯು ವಿದ್ಯಾರ್ಥಿಗಳ ಮೇಲಿನ ದಾಳಿ ಖಂಡಿಸಿ 2020ರ ಜನವರಿಯಲ್ಲಿ ಗೇಟ್ ವೇ ಆಫ್ ಇಂಡಿಯಾದಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ 36 ಮಂದಿಯ ಮೇಲಿದ್ದ ಪ್ರಕರಣವನ್ನು ಹಿಂಪಡೆಯಲು ಸಲ್ಲಿಸಲಾಗಿದ್ದ ಮನವಿಯನ್ನು ನ್ಯಾಯಾಲಯ ಅಂಗೀಕಾರ ಮಾಡಿದೆ.
36 ಮಂದಿ ಆರೋಪಿಗಳು ವೈಯಕ್ತಿಕ ಹಿತಾಸಕ್ತಿರಹಿತವಾಗಿ ಪ್ರತಿಭಟನೆ ನಡೆಸಿದ್ದರು ಎಂದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮನವಿಯಲ್ಲಿ ತಿಳಿಸಿದ್ದರು. ಅರ್ಜಿ ಪರಿಶೀಲನೆ ನಡೆಸಿದ ಎಸ್ಪ್ಲೇನೇಡ್ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್.ವಿ. ಡಿಂಡೋಕರ್ ಅವರು ತಿಂಗಳಾರಂಭದಲ್ಲೇ ಅರ್ಜಿ ಹಿಂಪಡೆಯುವಿಕೆಗೆ ಅಂಗೀಕಾರ ನೀಡಿದ್ದರು. ಸೋಮವಾರ ಇದರ ಆದೇಶದ ಪ್ರತಿ ಮಾಧ್ಯಮಗಳಿಗೆ ಲಭಿಸಿದೆ.
ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಗೌತಮ್ ಗಾಯಕ್ವಾಡ್ ಅವರ ಮೂಲಕ ಅರ್ಜಿ ಸಲ್ಲಿಸಲಾಗಿತ್ತು. ಆರೋಪಿಗಳು ವೈಯಕ್ತಿಕ ಹಿತಾಸಕ್ತಿಗಾಗಿ ಪ್ರತಿಭಟಿಸಿಲ್ಲ. ಅಲ್ಲದೆ, ಪ್ರಾಣಹಾನಿ, ಆಸ್ತಿ ಹಾನಿಗೆ ಕಾರಣರಾಗಿಲ್ಲ. ಹೀಗಾಗಿ ಅವರ ವಿರುದ್ದದ ದೂರು ಹಿಂಪಡೆಯಬೇಕು ಎಂದು ಮನವಿ ಮಾಡಿದ್ದರು.