ಹುಬ್ಬಳ್ಳಿ, ಜ 31 (DaijiworldNews/HR): ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಪುಡಿ ರೌಡಿಗಳಂತೆ ಮಾತನಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಮ್ ಇದ್ದರೆ, ತಾಕತ್ತಿದ್ದರೆ ಎನ್ನುವ ಮಾತುಗಳಿಂದಾಗಿ ರಾಜಕಾರಣಿಗಳು ನೈತಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದು, ಮತದಾರರ ಬಳಿ ಯಾವ ಮುಖ ಇಟ್ಟುಕೊಂಡು ಹೋಗುತ್ತಾರೆ? ಇವರ ಮಾತುಗಳು ಯುವಕರಿಗೆ, ಮತದಾರರಿಗೆ, ರಾಜಕಾರಣ, ಆಡಳಿತಕ್ಕೆ ಆದರ್ಶವೇ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಆಡಳಿತ ಪಕ್ಷದ ಮೇಲೆ ವಿಪಕ್ಷದವರು ಭ್ರಷ್ಟಾಚಾರದ ಬಗ್ಗೆ ಗುರುತರ ಆರೋಪ ಮಾಡಿದಾಗ ಅದನ್ನು ನ್ಯಾಯಯುತವಾಗಿ, ಗೌರವಯುತವಾಗಿ ವಿಚಾರಣೆ ನಡೆಸಬೇಕು. ಹಿಂದಿನಿಂದಲೂ ಹಾಗೆಯೇ ನಡೆದುಕೊಂಡು ಬಂದಿದೆ. ಆದರೆ ಬಿಜೆಪಿ 40 ಪರ್ಸೆಂಟ್ ಆರೋಪ ಕುರಿತು ತೆಗೆದುಕೊಂಡ ನಿಲುವು ಖಂಡನಾರ್ಹ ಎಂದು ಹೇಳಿದ್ದಾರೆ.