ಬೆಂಗಳೂರು, ಜ 31 (DaijiworldNews/DB): ಪಾರ್ಕಿಗೆ ವಾಯುವಿಹಾರಕ್ಕೆಂದು ಬಂದಿದ್ದ ಯುವಕ ಮತ್ತು ಯುವತಿಯಿಂದ 1000 ರೂಪಾಯಿ ಹಣ ವಸೂಲಿಗೈದಿರುವ ಹೋಂಗಾರ್ಡ್ನನ್ನು ಪೊಲೀಸರು ಬಂಧಿಸಿದ್ದಾರೆ.
ಇಂದು ಬೆಳಗ್ಗೆ ಯುವಕ ಮತ್ತು ಯುವತಿ ವಾಯುವಿಹಾರಕ್ಕೆ ಹೊರಟಿದ್ದರು. ಈ ವೇಳೆ ಅಲ್ಲಿಗೆ ಬಂದ ಹೋಂಗಾರ್ಡ್ ಮಂಜುನಾಥ್ ಯುವಕ ಮತ್ತು ಯುವತಿಗೆ ಬೆದರಿಕೆ ಹಾಕಿ 1000 ರೂಪಾಯಿ ಹಣ ವಸೂಲಿ ಮಾಡಿದ್ದಾನೆ. ತಾವೇನೂ ತಪ್ಪು ಮಾಡದಿದ್ದರೂ ಹಣ ವಸೂಲಿ ಮಾಡಿದ್ದಕ್ಕೆ ಅಸಮಾಧಾನಗೊಂಡ ಯುವತಿ ಹೋಂಗಾರ್ಡ್ ಮಂಜುನಾಥ್ನ ಬೈಕ್ ಫೋಟೋ ಸಮೇತ ಟ್ವೀಟ್ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಳು. ಅಲ್ಲದೆ ಸಿಬಂದಿ ನಡೆಗೆ ಸಾಮಾಜಿಕ ಜಾಲತಾಣದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಕಾರ್ಯತತ್ಪರರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರ ಕ್ಷಿಪ್ರ ಕ್ರಮಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆರಂಭದಲ್ಲಿ ಈತ ಪೊಲೀಸ್ ಸಿಬಂದಿಯೆಂದೇ ಭಾವಿಸಲಾಗಿತ್ತು. ಆದರೆ ಈತ ಹೋಂಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಬಿಬಿಎಂಪಿಯಿಂದ ಕುಂದಲಹಳ್ಳಿ ಕೆರೆ ಭದ್ರತೆಗೆ ನಿಯೋಜನೆಗೊಂಡಿದ್ದ ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.