ಕೊಪ್ಪಳ, ಜ 31 (DaijiworldNews/DB): ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಳ್ಳಾರಿ ಕ್ಷೇತ್ರದ ಅಭ್ಯರ್ಥಿಯಾಗಿ ಪತ್ನಿ ಅರುಣಾ ಲಕ್ಷ್ಮಿಯವರನ್ನು ಕಣಕ್ಕಿಳಿಸಲಾಗುವುದು ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಘೋಷಿಸಿದ್ದಾರೆ. ಆ ಮೂಲಕ ಬಿಜೆಪಿ ಶಾಸಕ, ಸಹೋದರ ಜಿ. ಸೋಮಶೇಖರ್ ರೆಡ್ಡಿ ವಿರುದ್ದ ಪತ್ನಿಯ ಸ್ಪರ್ಧೆಯನ್ನು ಖಚಿತಪಡಿಸಿದ್ದಾರೆ.
ಗಂಗಾವತಿ ತಾಲೂಕಿನ ಆನೆಗುಂದಿಯಲ್ಲಿ ಕಲ್ಯಾಣ ರಥಯಾತ್ರೆಗೆ ಚಾಲನೆ ನೀಡಿ ಮಂಗಳವಾರ ಮಾತನಾಡಿದ ಅವರು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ತಿಂಗಳ ಕೂಸು. ಬಳ್ಳಾರಿ ಕ್ಷೇತ್ರದಿಂದ ಪತ್ನಿ ಅರುಣಾ ಲಕ್ಷ್ಮಿ ಅವರನ್ನೇ ಕಣಕ್ಕಿಳಿಸುವುದಾಗಿ ಇಂದು ಘೋಷಿಸುತ್ತಿದ್ದೇನೆ ಎಂದರು.
ಹನುಮ ಜನ್ಮ ಸ್ಥಳ ಅಂಜನಾದ್ರಿಯ ಸಮಗ್ರ ಅಭಿವೃದ್ದಿಗಾಗಿ 5 ಸಾವಿರ ಕೋಟಿ ರೂ.ಗಳ ಸಮಗ್ರ ಯೋಜನೆಯನ್ನು ಸಿದ್ದಪಡಿಸಿದ್ದೇನೆ. ಇಡೀ ವಿಶ್ವವೇ ನಮ್ಮೆಡೆಗೆ ತಿರುಗಿ ನೋಡಬೇಕು. ಅಂತಹ ಬದಲಾವಣೆಯನ್ನು ತರಲಾಗುವುದು. ಗಂಗಾವತಿಯಲ್ಲಿ 200 ಬೆಡ್ಗಳ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣದ ಗುರಿ ಇದೆ. ಸ್ಲಂರಹಿತವಾದ ಪ್ರದೇಶ ಇಲ್ಲಿ ನಿರ್ಮಾಣ ಮಾಡುವ ಉದ್ದೇಶ ನನ್ನದು ಎಂದವರು ತಿಳಿಸಿದರು.
ಜನ ನಮ್ಮ ಕೆಆರ್ಪಿಪಿ ಧ್ಯೇಯೋದ್ದೇಶಗಳ ಬಗ್ಗೆ ಆಸಕ್ತಿ ತಾಳಿದ್ದಾರೆ. ನಿಮ್ಮ ಶಕ್ತಿ ನನಗೆ ಆನಬಲ. ನನಗೆ ಅಧಿಕಾರ ನೀಡಿದ್ದಲ್ಲಿ ನಿಮ್ಮ ಕೆಲಸಕ್ಕಾಗಿ ನೀವು ಬೆಂಗಳೂರಿಗೆ ಹೋಗಬೇಕಿಲ್ಲ. ಸಚಿವ, ಶಾಸಕರೇ ನಿಮ್ಮ ಬಳಿ ಬರುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಆಸ್ತಿ ಮುಟ್ಟುಗೋಲು ಹಾಕುವುದಾಗಿ ನನಗೆ ಬೆದರಿಕೆಗಳು ಬರುತ್ತಿವೆ. ಆದರೆ ಖಂಡಿತಾ ನಾನು ಹೆದರುವುದಿಲ್ಲ. ಕಳೆದ ಹನ್ನೆರಡು ವರ್ಷ ವನವಾಸ ಅನುಭವಿಸಿದ್ದೇನೆ. ನನ್ನ ವಿರುದ್ದ ಬರುವ ಎಲ್ಲಾ ಅವಮಾನಗಳನ್ನು ಸಮಾನಾಗಿ ಸ್ವೀಕರಿಸುತ್ತೇನೆ. ನಾನು ನೀಡಿದ ಭರವಸೆಗಳನ್ನು ಖಂಡಿತಾ ಈಡೇರಿಸುತ್ತೇನೆ ಎಂದರು.