ನವದೆಹಲಿ, ಜ 31 (DaijiworldNews/DB): ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆ ವಿರುದ್ದ ಬಿಜೆಪಿ ನಾಯಕಿ, ನಟಿ ಖುಷ್ಬು ಸುಂದರ್ ಕಿಡಿ ಕಾರಿದ್ದಾರೆ. ಏರ್ ಇಂಡಿಯಾದಲ್ಲಿ ಪ್ರಯಾಣಿಕರಿಗೆ ಕಳಪೆ ಮಟ್ಟದ ಸೇವೆ ಸಿಗುತ್ತಿದೆ. ವ್ಹೀಲ್ ಚಯರ್ ವ್ಯವಸ್ಥೆ ಕೂಡಾ ಅವರ ಬಳಿ ಇಲ್ಲ ಎಂದು ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಮೊಣಕಾಲಿನ ಗಂಭೀರ ಗಾಯಕ್ಕೊಳಗಾದ ನನಗೆ ನಡೆದಾಡಲು ಸಾಧ್ಯವಿಲ್ಲದ ಕಾರಣ ವ್ಹೀಲ್ಚೇರ್ ಕೇಳಿದ್ದಕ್ಕೆ ಏರ್ ಇಂಡಿಯಾದವರು ವ್ಹೀಲ್ ಚೇರ್ ಒದಗಿಸಲು ನನ್ನನ್ನು ಸುಮಾರು ಅರ್ಧ ಗಂಟೆ ಕಾಯಿಸಿದರು. ಬಳಿಕ ಇನ್ನೊಂದು ವಿಮಾನಯಾನ ಸಂಸ್ಥೆಯಿಂದ ಎರವಲು ಪಡೆದುಕೊಂಡು ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಯಾಣಿಕರ ಅನುಕೂಲಕ್ಕಾಗಿ ತಮ್ಮಲ್ಲೇ ವ್ಹೀಲ್ಚೇರ್ ಸಹಿತ ಅಗತ್ಯ ಅವಶ್ಯಕತೆಗಳನ್ನು ಇಟ್ಟುಕೊಳ್ಳಬೇಕು. ಆದರೆ ಏರ್ ಇಂಡಿಯಾ ಈ ವಿಚಾರದಲ್ಲಿ ಕಳಪೆ ಸೇವೆ ನೀಡುತ್ತಿದೆ ಎಂದಿದ್ದಾರೆ.
ಇನ್ನು ಖುಷ್ಬು ಟ್ವೀಟ್ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆ, ನಮ್ಮಿಂದ ಪ್ರಮಾದವಾಗಿದೆ. ಈ ಸಂಬಂಧ ಚೆನ್ನೈ ವಿಮಾನ ನಿಲ್ದಾಣ ಸಿಬಂದಿಯಲ್ಲಿ ನಾವು ವಿಚಾರಿಸುತ್ತೇವೆ. ನಿಮಗಾದ ಅನಾನುಕೂಲತೆಗಾಗಿ ಕ್ಷಮೆ ಇರಲಿ ಎಂದಿದೆ.
ಲೋಪಗಳಿಂದಾಗಿ ಆಗಾಗ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆ ಸುದ್ದಿಯಾಗುತ್ತಲೇ ಇದೆ. ಕಳೆದ ನವೆಂಬರ್ 26ರಂದು ಯುಎಸ್ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕನೊಬ್ಬ ಮದ್ಯಪಾನ ಮಾಡಿ ಸಹ ಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ ಸಂಸ್ಥೆಗೆ 30 ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು. ಈ ವೇಳೆ ಸಿಬಂದಿಯ ನಿರ್ಲಕ್ಷ್ಯದ ಬಗ್ಗೆಯೂ ಸಹ ಪ್ರಯಾಣಿಕೆ ಕಿಡಿ ಕಾರಿದ್ದರು. ಪ್ಯಾರಿಸ್ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿಯೂ ಪ್ರಯಾಣಿಕನೊಬ್ಬ ಮೂತ್ರ ವಿಸರ್ಜಿಸಿದ್ದಲ್ಲದೆ, ಶೌಚಾಲಯದಲ್ಲಿ ಸಿಗರೇಟ್ ಸೇದಿದ್ದ. ಘಟನೆಯನ್ನು ಇಂಡಿಯಾ ಮುಚ್ಚಿಟ್ಟಿತ್ತು. ಬಳಿಕ ವಿಚಾರ ಬೆಳಕಿಗೆ ಬಂದು ಡಿಜಿಸಿಎಯು ಸಂಸ್ಥೆಗೆ 10 ಲಕ್ಷ ರೂಪಾಯಿ ದಂಡ ವಿಧಿಸಿತ್ತು.