ನವದೆಹಲಿ, ಜ 31 (DaijiworldNews/DB): ಬಿಬಿಸಿ ಮೋದಿ ವಿರುದ್ದ ತಯಾರಿಸಿರುವ ಸಾಕ್ಷ್ಯಚಿತ್ರಕ್ಕೆ ಚೀನಾ ನಂಟಿದೆ. ಚೀನಾ ಹಣಕ್ಕಾಗಿ ಈ ಸಾಕ್ಷ್ಯಚಿತ್ರ ತಯಾರಾಗಿದೆ ಎಂದು ರಾಜ್ಯಸಭೆ ಬಿಜೆಪಿ ಸದಸ್ಯ ಮಹೇಶ್ ಜೇಠ್ಮಲಾನಿ ಆರೋಪಿಸಿದ್ದಾರೆ.
ಈ ಸಂಬಂಧ ಮಂಗಳವಾರ ಟ್ವೀಟ್ ಮಾಡಿರುವ ಅವರು, ಬಿಬಿಸಿಗೆ ಹಣದ ಅನಿವಾರ್ಯತೆ ಸೃಷ್ಟಿಯಾಗಿದೆ. ಅದಕ್ಕಾಗಿ ಅದು ಭಾರತ ವಿರೋಧಿಯಾಗಿ ವರ್ತಿಸುತ್ತಿದೆ. ಚೀನಾದ ಅಜೆಂಡಾ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಿಬಿಸಿಯು, ಚೀನಾ ಹಣಕ್ಕಾಗಿಯೇ ಮೋದಿ ವಿರುದ್ದ ಸಾಕ್ಷ್ಯಚಿತ್ರ ತಯಾರಿಸಿದೆ ಎಂದು ಕಿಡಿ ಕಾರಿದ್ದಾರೆ.
ಭಾರತ ವಿರೋಧಿಯಾಗಿರುವುದು ಚೀನಾದ ಬಹುಕಾಲದ ಮನಸ್ಥಿತಿ. 2021ರವರೆಗೆ ಭಾರತದ ನಕ್ಷೆಯನ್ನು ವಿರೂಪಗೊಳಿಸುವ ಕೆಲಸ ಆ ದೇಶ ಮಾಡುತ್ತಿತ್ತು. ಜಮ್ಮು-ಕಾಶ್ಮೀರವನ್ನು ಮ್ಯಾಪ್ನಿಂದ ತೆಗೆದು ಹಾಕಿ ಬಳಿಕ ಭಾರತದ ಕ್ಷಮೆ ಕೇಳಿತು. ಆದರೂ ಆ ದೇಶಕ್ಕೆ ಬುದ್ದಿ ಬಂದಿಲ್ಲ. ಭಾರತದ ವಿರುದ್ದ ಅದರ ಕುತಂತ್ರದ ಭಾಗವಾಗಿ ಇದೀಗ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.