ಅಹಮದಾಬಾದ್, ಜ 31 (DaijiworldNews/DB): ಮಹಿಳೆಯೊಬ್ಬರ ಮೇಲೆ 2013ರಲ್ಲಿ ಅತ್ಯಾಚಾರ ಎಸಗಿದ ಪ್ರಕರಣ ಸಂಬಂಧ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಿ ಗುಜರಾತ್ನ ಗಾಂಧಿನಗರದ ಸೆಷನ್ಸ್ ನ್ಯಾಯಾಲಯವು ಮಂಗಳವಾರ ತೀರ್ಪು ನೀಡಿದೆ.
ಮೊಟೆರಾದಲ್ಲಿರುವ ತನ್ನ ಆಶ್ರಮದಲ್ಲಿ ಅಸಾರಾಂ ತನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದರು ಎಂಬುದಾಗಿ ಸೂರತ್ ಮೂಲದ ಮಹಿಳೆಯೊಬ್ಬರು ಆರೋಪಿಸಿ ದೂರು ನೀಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಅಸಾರಾಂ ದೋಷಿ ಎಂಬುದಾಗಿ ತೀರ್ಪು ನೀಡಿದೆ. ಭಾರತೀಯ ದಂಡ ಸಂಹಿತೆ 376 2 (ಸಿ) (ಅತ್ಯಾಚಾರ), 377 (ಅಸ್ವಾಭಾವಿಕ ಅಪರಾಧಗಳು), 342 (ತಪ್ಪಾದ ಬಂಧನ), 354 (ಹೆಣ್ಣಿನ ನಮ್ರತೆಗೆ ಆಕ್ರೋಶ ವ್ಯಕ್ತಪಡಿಸುವ ಉದ್ದೇಶದಿಂದ ಹಲ್ಲೆ), 357 (ಹಲ್ಲೆ) ಅಡಿಯಲ್ಲಿ ಈ ತೀರ್ಪು ನೀಡಲಾಗಿದ್ದು, ಅಸಾರಾಂಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಇನ್ನು ಸುಮಾರು ಹತ್ತು ವರ್ಷಗಳ ಹಿಂದೆ ರಾಜಸ್ಥಾನದ ತನ್ನ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಆರೋಪದಲ್ಲಿ ಈಗಾಗಲೇ ಅವರು ಜೋದ್ಫುರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.