ನವದೆಹಲಿ, ಜ 31 (DaijiworldNews/DB): ಕುಡಿದ ಮತ್ತಿನಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಸಹಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದಲ್ಲಿ ಜೈಲು ಸೇರಿರುವ ಆರೋಪಿ ಶಂಕರ್ ಮಿಶ್ರಾಗೆ ಜಾಮೀನು ಮಂಜೂರು ಮಾಡಿ ದೆಹಲಿ ನ್ಯಾಯಾಲಯ ಆದೇಶಿಸಿದೆ.
ಒಂದು ಲಕ್ಷ ರೂಪಾಯಿ ಬಾಂಡ್ ಮೇಲೆ ಆತನಿಗೆ ಜಾಮೀನು ಮಂಜೂರಾಗಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ಜೋತ್ ಸಿಂಗ್ ಭಲ್ಲಾ ಜಾಮೀನು ನೀಡಿದ್ದಾರೆ. ಆತ ಈ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್ ನಿರಾಕರಿಸಿತ್ತಲ್ಲದೆ, ಈ ವರ್ತನೆ ನಾಚಿಕೆಗೇಡು ಎಂದು ಜರಿದಿತ್ತು. ಆದರೆ ಇದೀಗ ಆತನಿಗೆ ಜಾಮೀನು ಮಂಜೂರಾಗಿದೆ.
ಅಮೆರಿಕದ ನ್ಯೂಯಾರ್ಕ್ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ಈತ ಮೂತ್ರ ವಿಸರ್ಜನೆ ಮಾಡಿರುವುದಾಗಿ ಆರೋಪಿಸಿ ಮಹಿಳೆ ದೂರು ನೀಡಿದ್ದರು. ಅದರಂತೆ ಆತನ ಬಂಧನಕ್ಕಾಗಿ ಪೊಲೀಸರು ಲುಕ್ಔಟ್ ನೋಟಿಸ್ ಹೊರಡಿಸಿದ್ದರು. ಬಳಿಕ ಆತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ೀ ಪ್ರಕರಣದಲ್ಲಿ ಏರ್ ಇಂಡಿಯಾಗೆ ಡಿಜಿಸಿಎ 30 ಲಕ್ಷ ರೂ. ದಂಡ ವಿಧಿಸಿತ್ತು.