ಧಾರವಾಡ, ಜ 31 (DaijiworldNews/SM): ಕೃಷಿ ಪ್ರಶಸ್ತಿಗೆ ಭಾಜನರಾದ ರೈತರ ಮಕ್ಕಳ ಶಿಕ್ಷಣದ ಶುಲ್ಕವನ್ನು ಸರಕಾರ ಭರಿಸಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದಾರೆ. ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಸೇರಿದಂತೆ ಉನ್ನತ ಶಿಕ್ಷಣದ ಶುಲ್ಕವನ್ನು ಸರ್ಕಾರ ಪಾವತಿಸಲಿದೆ ಎಂದಿದ್ದಾರೆ.
ಕೃಷಿ ವಿಶ್ವವಿದ್ಯಾಲಯದ ನೂತನ ಯೋಜನೆಗಳಿಗೆ ಚಾಲನೆ ನೀಡಿ, ಕೃಷಿ ಪಂಡಿತ, ಕೃಷಿ ಪ್ರಶಸ್ತಿ ಪ್ರಧಾನದ ಬಳಿಕ ಮಾತನಾಡಿದ ಮುಖ್ಯಮಂತ್ರಿ, ದುಡಿಯುವ ವರ್ಗದ ಮಕ್ಕಳೂ ವಿದ್ಯೆ ಕಲಿಯಬೇಕು. ಅವರೂ ಗುಡಿಸಲಿನಿಂದ ಹೊರಗೆ ಬರಬೇಕು. ಬದಲಾವಣೆ ಅತ್ಯಂತ ತಳಮಟ್ಟದಿಂದ ಆಗಬೇಕು. ಕಟ್ಟಕಡೆಯ ವ್ಯಕ್ತಿಯ ಬದುಕನ್ನು ಗಮನದಲ್ಲಿರಿಸಿಕೊಂಡು ಕಾರ್ಯಕ್ರಮ ರೂಪಿಸಬೇಕು ಎಂದರು.
ರೈತರ ಪರ ವಿಶೇಷ ಬಜೆಟ್: ಈ ಬಾರಿ ರೈತರ ಪರವಾಗಿ ವಿಶೇಷವಾದ ಬಜೆಟ್ ಇರಲಿದೆ. ಗ್ರಾಮೀಣ ಬದುಕು ಹಸನಾಗಬೇಕು. ಅಲ್ಲಿ ಆರ್ಥಿಕತೆ ಬೆಳೆದು ಸಾಮಾಜಿಕವಾಗಿ ಸಮಾನತೆ ತರುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದರು. ಕೃಷಿಗೆ ಪೂರಕವಾಗಿರುವ ಇತರೆ ಕಸುಬುದಾರರಿಗೆ ಕಾಯಕ ಯೋಜನೆ ರೂಪಿಸಲಾಗಿದೆ. ಸ್ವಾಮಿ ವಿವೇಕಾನಂದ ಯುವಶಕ್ತಿಯೋಜನೆಯನ್ನು ಮುಂದಿನ ವಾರ ಉದ್ಘಾಟಿಸಲಾಗುತ್ತಿದೆ. ಹಾಗೂ ಸ್ತ್ರೀ ಶಕ್ತಿ ಯೋಜನೆ ಜಾರಿಗೆ ತಂದು ಸ್ವಯಂ ಉದ್ಯೋಗಕ್ಕೆ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.