ಹಾಸನ,ಮಾ 13(MSP): ನಾನು ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡದೇ ಇರಲು ನಿರ್ಧರಿಸಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಹೇಳಿದ್ದಾರೆ.
ಅವರು ಹಾಸನದ ಹೊಳೆನರಸೀಪುರ ತಾ. ಮೂಡಲಹಿಪ್ಪೆ ಗ್ರಾಮದಿಂದ ಜೆಡಿಎಸ್ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಈ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಇದಕ್ಕೂ ಮುಂಚೆ ಹಾಸನ ಹೊಳೆನರಸೀಪುರದ ಮೂಡಲಹಿಪ್ಪೆ ಗ್ರಾಮದಲ್ಲಿರುವ ಚೆನ್ನಕೇಶವ ದೇವಾಲಯಕ್ಕೆ ಮಗ ರೇವಣ್ಣ , ಸೊಸೆ ಭವಾನಿ ಮೊಮ್ಮಗ ಪ್ರಜ್ವಲ್ ಹಾಗೂ ಪಕ್ಷದ ಶಾಸಕರ ಜೊತೆ ಆಗಮಿಸಿ ನಾಮಪತ್ರ ಇಟ್ಟು ಪೂಜೆ ಸಲ್ಲಿಸಿದರು.
ಆ ಬಳಿಕ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ''ನಾನು ಚುನಾವಣೆಯಲ್ಲಿ ಹಾಸನದಿಂದ ಸ್ಪರ್ಧಿಸುವುದಿಲ್ಲ ಎಂದು ತೀರ್ಮಾನಿಸಿದ್ದೇನೆ. ನನ್ನ ಬದಲು ಮೊಮ್ಮಗ ಪ್ರಜ್ವಲ್ ರೇವಣ್ಣ ಹಾಸನ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ನಮ್ಮ ಪಕ್ಷದ ಪ್ರಚಾರವನ್ನು ಮೂಡಲ ಹಿಪ್ಪೆ ಗ್ರಾಮದಿಂದ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದೇನೆ" ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದ 28 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ಗೆ ಎಷ್ಟು ಹಾಗೂ ಜೆಡಿಎಸ್ಗೆ ಎಷ್ಟು ಎಂಬ ಬಗ್ಗೆ ಅಂತಿಮ ತೀರ್ಮಾನ ಇನ್ನೂ ಆಗಿಲ್ಲ. ಮಾರ್ಚ್ 15 ರಂದು ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.