ನವದೆಹಲಿ, ಫೆ 01 (DaijiworldNews/HR): 2023-2024 ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಸಿರಿಧಾನ್ಯ ಕೃಷಿ, ಮಾರುಕಟ್ಟೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆಗೆ ಉತ್ತೇಜನ ನೀಡಲಾಗುವುದು ಎಂದು ಕೇಂದ್ರ ವಿತ್ತಸಚಿವೆ ನಿರ್ಮಲ ಸೀತಾರಾಮನ್ ತಿಳಿಸಿದ್ದಾರೆ.
ರಾಗಿ ಸೇರಿದಂತೆ ಸಿರಿಧಾನ್ಯಗಳ ಬೆಳೆ ಪದ್ಧತಿ ಸುಧಾರಣೆಗಾಗಿ ಸಂಶೋಧನೆ ನಡೆಸಲು ಹಾಗೂ ಉತ್ತಮ ಬೆಳೆ ಪದ್ಧತಿಯ ದಾಖಲಾತಿಗಾಗಿ 'ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮಿಲೆಟ್ ರೀಸರ್ಚ್' ಸಂಸ್ಥೆಗೆ ಅಗತ್ಯ ನೆರವು ಒದಗಿಸಲಾಗುವುದು. ಈ ಸಂಸ್ಥೆಗೆ 'ಸೆಂಟರ್ ಆಫ್ ಎಕ್ಸೆಲೆನ್ಸ್' ಉಪಕ್ರಮದ ಮೂಲಕ ಬೆಂಬಲಿಸಲಾಗುವುದು ಎಂದರು.
ಕೃಷಿ-ಸ್ಟಾರ್ಟ್ ಅಪ್ ಗಳನ್ನು ತೆರೆಯಲು ಅವರನ್ನು ಪ್ರೋತ್ಸಾಹಿಸಲು ಕೃಷಿ ವರ್ಧನೆ ನಿಧಿಯನ್ನು ನೀಡಲಾಗುವುದು. ನಾವು ವಿಶ್ವದಲ್ಲೇ ಅತಿ ದೊಡ್ಡ ಆಹಾರ ಧಾನ್ಯಗಳ ಉತ್ಪಾದಕರು ಮತ್ತು ಎರಡನೇ ಅತಿದೊಡ್ಡ ರಫ್ತುದಾರರಾಗಿದ್ದೇವೆ ಎಂದರು.
ಕೃಷಿ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಪರಿಚಯ, ಉತ್ಪಾದನೆ ಹೆಚ್ಚಳ, ಹತ್ತಿ ಬೆಳೆಯ ಇಳುವರಿ ವೃದ್ಧಿ ಸೇರಿದಂತೆ ಕೃಷಿ ಜಗತ್ತಿನ ಪ್ರಗತಿಗೆ ಪೂರಕವಾಗಿ ವಿಶೇಷ ಕೃಷಿ ಪ್ರಗತಿನಿಧಿ ಆರಂಭಿಸುವುದಾಗಿ ಸಚಿವರು ಘೋಷಿಸಿದರು.