ಬೆಂಗಳೂರು, ಫೆ 01 (DaijiworldNews/DB): ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಶಿಕ್ಷಣ ನೀಡುವ ಅವಧಿಯನ್ನು 3 ಗಂಟೆಗಳ ಕಾಲ ಕಡಿತಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಹೊಸ ಆದೇಶದ ಪ್ರಕಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಅಂಗನವಾಡಿಗಳು ಕಾರ್ಯನಿರ್ವಹಿಸಲಿವೆ.
ಈ ಹಿಂದೆ ಬೆಳಗ್ಗೆ 9.30ರಿಂದ ಸಂಜೆ 4 ಗಂಟೆಯವರೆಗೆ ಅಂಗನವಾಡಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಇದೀಗ ಹೊಸ ಆದೇಶದ ಪ್ರಕಾರ ಮೂರು ಗಂಟೆ ಕಡಿತಗೊಳ್ಳಲಿದೆ. ಅಂದರೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮಕ್ಕಳಿಗೆ ಅಂಗನವಾಡಿಗಳಲ್ಲಿ ಶಿಕ್ಷಣ ಲಭಿಸಲಿದೆ.
ಪ್ರಧಾನಮಂತ್ರಿ ಮಾತೃ ವಂದನೆ ಯೋಜನೆ ಹಾಗೂ ಭಾಗ್ಯ ಲಕ್ಷ್ಮಿ ಯೋಜನೆಯ ಫಲಾನುಭವಿಗಳು ಯೋಜನೆ ಸಂಬಂಧ ಯಾವುದೇ ಮಾಹಿತಿಗಾಗಿಯೂ ಮಧ್ಯಾಹ್ನ 2 ಗಂಟೆಯ ಬಳಿಕವೇ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಬೇಕು ಎಂದು ಸೂಚಿಸಲಾಗಿದೆ.