ಭೋಪಾಲ್, ಫೆ 01 (DaijiworldNews/DB): ಮಧ್ಯಪ್ರದೇಶದಲ್ಲಿರುವ ಮದ್ಯದಂಗಡಿಗಳನ್ನು ಗೋಶಾಲೆಗಳಾಗಿ ಪರಿವರ್ತನೆ ಮಾಡಬೇಕು ಎಂದು ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ ಆಗ್ರಹಿಸಿದ್ದಾರೆ.
ಭೋಪಾಲ್ ನ ದೇವಸ್ಥಾನವೊಂದರಲ್ಲಿ ತನ್ನ ನಾಲ್ಕು ದಿನಗಳ ವಾಸ್ತವ್ಯವನ್ನು ಕೊನೆಗೊಳಿಸಿದ ಬಳಿಕ ಮಾತನಾಡಿದ ಅವರು, ಮದ್ಯ ಸೇವನೆಯಿಂದಾಗಿ ಮಹಿಳೆಯರ ವಿರುದ್ದ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ರಾಜ್ಯದಲ್ಲಿರುವ ಮದ್ಯದಂಗಡಿಗಳನ್ನು ಗೋಶಾಲೆಗಳನ್ನಾಗಿ ಪರಿವರ್ತಿಸಬೇಕು. ಆದರೆ ಇದಕ್ಕೆ ಸರ್ಕಾರದ ನೀತಿಗೆ ಕಾಯದೆ ನಿಯಮ ಉಲ್ಲಂಘನೆ ಮಾಡಿ ನಡೆಸಲ್ಪಡುತ್ತಿರುವ ಮದ್ಯದಂಗಡಿಗಳನ್ನು ಗೋಶಾಲೆಗಳಾಗಿ ಪರಿವರ್ತಿಸಲು ಸ್ವ ಕಾರ್ಯಾಚರಣೆಗಿಳಿಯುವುದಾಗಿ ಹೇಳಿದರು.
ಓರ್ಚಾದಲ್ಲಿರುವ ಅಕ್ರಮ ಮದ್ಯದ ಅಂಗಡಿಯ ಹೊರಗೆ 11 ಹಸುಗಳನ್ನು ತಂದು ಹಾಕಲು ಈಗಾಗಲೇ ವ್ಯವಸ್ಥೆ ಮಾಡಲು ಜನರಿಗೆ ತಿಳಿಸಲಾಗಿದೆ. ಅವುಗಳಿಗೆ ನೀರು, ಆಹಾರವನ್ನು ಮದ್ಯದ ಅಂಗಡಿಯವರೇ ನೀಡುತ್ತಾರೆ. ಈ ವಿಚಾರದಲ್ಲಿ ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ನಿಯಂತ್ರಿತ ಮದ್ಯ ನೀತಿಯ ಬೇಡಿಕೆ ಶ್ಲಾಘನೀಯ. ಇದರ ಬೆಂಬಲಾರ್ಥವಾಗಿ ‘ಮಧುಶಾಲಾ ಮೇ ಗೌಶಾಲಾ’ ಕಾರ್ಯಕ್ರಮವನ್ನು ಆರಂಭ ಮಾಡುವುದಾಗಿ ಅವರು ಘೋಷಣೆ ಮಾಡಿದರು.