ಬೆಳಗಾವಿ, ಫೆ 01 (DaijiworldNews/DB): ಸಿಡಿ ಪ್ರಕರಣ ಹಿಡಿದುಕೊಂಡು ಆರೋಪ-ಪ್ರತ್ಯಾರೋಪ ಮಾಡುವುದರಿಂದ ಮೂರು ಕುಟುಂಬಗಳಿಗೆ ಡ್ಯಾಮೇಜ್ ಆಗುತ್ತದೆ. ಆ ವಿಚಾರ ಇಲ್ಲಿಗೇ ಬಿಟ್ಟು ಬಿಡಿ, ಮುಂದುವರಿಸಬೇಡಿ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿಹೊಳಿ ನಡುವೆ ಈ ವಿಚಾರವಾಗಿ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗೋಕಾಕ್ನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಬಾಲಚಂದ್ರ ಜಾರಕಿಹೊಳಿ, ಡಿಕೆಶಿ, ರಮೇಶ್ ಜಾರಕಿಹೊಳಿ ಮತ್ತು ಹೆಬ್ಬಾಳ್ಕರ್ ಅವರ ಮೂರೂ ಕುಟುಂಬಗಳು ದೊಡ್ಡ ಹೆಸರಿರುವ ಕುಟುಂಬ. ಈ ಮೂವರು ಸಿಡಿ ಪ್ರಕರಣ ಹಿಡಿದುಕೊಂಡು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿಕೊಳ್ಳುವುದರಿಂದ ಮೂವರ ಕುಟುಂಬಕ್ಕೂ ಡ್ಯಾಮೇಜ್ ಆಗುತ್ತದೆ. ಹೀಗಾಗಿ ಇಲ್ಲಿಗೇ ಅದನ್ನು ಬಿಟ್ಟುಬಿಡಿ ಎಂದರು.
ಎಲ್ಲರೂ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಅವರು ಇನ್ನೂ ಎತ್ತರಕ್ಕೆ ಬೆಳೆಯಬೇಕು. ರಾಜಕೀಯವಾಗಿ ಹೋರಾಟ ಮಾಡಬೇಕೇ ಹೊರತು ಪರಸ್ಪರ ಸಾರ್ವಜನಿಕವಾಗಿ ಟೀಕೆ ಮಾಡುವುದನ್ನಲ್ಲ. ಜನರು ಯಾರನ್ನು ಬಯಸುತ್ತಾರೆಯೇ ಅವರಿಗೆ ಮತ ನೀಡುತ್ತಾರೆ ಎಂದು ಪ್ರತಿಪಾದಿಸಿದರು.
ಚುನಾವಣೆ ಸಮೀಪದಲ್ಲಿರುವಂತೆಯೇ ಡಿಕೆಶಿ, ರಮೇಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ವಾಗ್ಯುದ್ದ ಮುಂದುವರಿದಿದೆ. ಸಿಡಿ ಪ್ರಕರಣದ ಹಿಂದೆ ಡಿಕೆಶಿ ಮತ್ತು ಶಾಸಕಿ ಕುಟುಂಬದ ಕೈವಾಡ ಇದೆ ಎಂದು ಆರೋಪಿಸಿದ್ದ ರಮೇಶ್ ಜಾರಕಿಹೊಳಿ, ಡಿಕೆಶಿ ರಾಜಕೀಯ ಪ್ರವೇಶಕ್ಕೆ ಮುನ್ನ ಕನಕಪುರದಲ್ಲಿ ಬ್ಲೂ ಫಿಲ್ಮಂ ದಂಧೆ ಮಾಡುತ್ತಿದ್ದರು ಎಂಬ ಗಂಭೀರ ಆರೋಪ ಮಾಡಿದ್ದರು. ಇನ್ನು ಜಾರಕಿಹೊಳಿ ಆರೋಪಕ್ಕೆ ತಿರುಗೇಟು ನೀಡಿದ್ದ ಡಿಕೆಶಿ, ಪ್ಯಾಂಟ್ ಬಿಚ್ಚಲು ಅವರಿಗೆ ನಾನು ಹೇಳಿದ್ನಾ ಎಂದು ಪ್ರಶ್ನಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಹಾಳಾಗಲು ವಿಷಕನ್ಯೆಯೇ ಕಾರಣ ಎಂದು ರಮೇಶ್ ಜಾರಕಿಹೊಳಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.