ವಲ್ಸಾದ್, ಫೆ 01 (DaijiworldNews/DB): ದೇಶದ ಅತ್ಯಂತ ಕಠಿಣ ಚಾರಣಗಳಲ್ಲೊಂದಾದ ಚಾದರ್ ಟ್ರೆಕ್ ಪೂರ್ಣಗೊಳಿಸಿ 63 ವರ್ಷದ ವ್ಯಕ್ತಿಯೊಬ್ಬರು ದಾಖಲೆ ಬರೆದಿದ್ದಾರೆ. ಮೈನಸ್ 40 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಪ್ರದೇಶದಲ್ಲಿ ಕೊರೆಯುವ ಚಳಿಯಲ್ಲಿ ಚಾದರ್ ಟ್ರೆಕ್ ಪೂರ್ಣಗೊಳಿಸಿದ ದೇಶದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
ಗುಜರಾತ್ನ ಕಾಂತಿಭಾಯಿ ಪಟೇಲ್ ( 63) ಅವರೇ ಚಾದರ್ ಟ್ರೆಕ್ ಪೂರ್ಣಗೊಳಿಸಿದವರು. ಚಾದರ್ ಟ್ರೆಕ್ನ್ನು ಝನ್ಸ್ಕಾರ್ ಗಾರ್ಜ್ ಟ್ರೆಕ್ ಎಂದೂ ಕರೆಯಲಾಗುತ್ತದೆ. ಲಡಾಖ್ನಲ್ಲಿರುವ ಹೆಪ್ಪುಗಟ್ಟಿದ ಝನ್ಸ್ಕರ್ ನದಿಯ ಮೇಲೆ ಈ ಪ್ರದೇಶವಿದ್ದು, ದೇಶದ ಅತ್ಯಂತ ಕಠಿಣ ಚಾರಣಗಳ ಪೈಕಿ ಇದೂ ಒಂದಾಗಿದೆ. ಸದ್ಯ ಅಲ್ಲಿ ಮೈನಸ್ 40 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಕೊರೆಯುವ ಚಳಿಯಲ್ಲಿಯೇ ಕಾಂತಿಭಾಯಿ ಟ್ರೆಕ್ ಪೂರ್ಣಗೊಳಿಸಿದ್ದಾರೆ. ಜನವರಿ 23ರಂದು ಅವರು ಟ್ರೆಕ್ ಪೂರ್ಣಗೊಳಿಸಿದರು.
2014ರಲ್ಲಿ ಕಾಂತಿಭಾಯಿ ಅವರ ಪತ್ನಿ ಮೃತಪಟ್ಟ ನಂತರ ಗುಜರಾತ್ನ ವಾಪಿಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ. ಇನ್ನು ಇಬ್ಬರು ಪುತ್ರಿಯರ ಪೈಕಿ ಓರ್ವ ಪುತ್ರಿ ಬೆಂಗಳೂರಿನಲ್ಲಿ ಐಟಿ ಎಂಜಿನಿಯರ್ ಆಗಿದ್ದಾರೆ. ಇನ್ನೊಬ್ಬ ಪುತ್ರಿ ಪುಣೆಯಲ್ಲಿ ವಾಸವಾಗಿದ್ದಾರೆ. ನಿವೃತ್ತಿ ಬಳಿಕ ಫಾರ್ಮಾ ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿದ್ದ ಕಾಂತಿಭಾಯಿ ಜೀವನದಲ್ಲಿ ತೀವ್ರ ಏಕಾಂಗಿತನದ ಅನುಭವವಾಗಿದ್ದರಿಂದ ಟ್ರೆಕ್ಕಿಂಗ್ನಂತಹ ಸಾಹಸ ಪ್ರವೃತ್ತಿಗೆ ತಮ್ಮನ್ನು ಒಗ್ಗಿಸಿಕೊಂಡರು.
ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಐದು ಬಾರಿ ಪೂರ್ಣಗೊಳಿಸಿದ ಖ್ಯಾತಿಯೂ ಇವರದಾಗಿದೆ. ಕಳೆದ 3 ವರ್ಷಗಳಲ್ಲಿ ಭಾರತದ ವಿವಿಧ ಭಾಗಗಳಲ್ಲಿ 55,000 ಕಿ.ಮೀಗಳಿಗೂ ಅಧಿಕ ದೂರ ಸೈಕಲ್ ತುಳಿಯುವ ಮೂಲಕವೂ ಸಾಹಸಗೈದಿದ್ದಾರೆ.