ನವದೆಹಲಿ, ಫೆ 01 (DaijiworldNews/DB): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಬಗ್ಗೆ ವಿಪಕ್ಷಗಳು ಹಲವು ರೀತಿಯ ಟೀಕೆ ವ್ಯಕ್ತಪಡಿಸಿವೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡಲಾದ ಬಜೆಟ್ ಇದು ಎಂದು ವಿಪಕ್ಷದ ಕೆಲ ನಾಯಕರು ವ್ಯಂಗ್ಯವಾಡಿದ್ದಾರೆ.
ಮೂರ್ನಾಲ್ಕು ರಾಜ್ಯಗಳಿಗೆ ಸದ್ಯದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಇಂದು ಮೋದಿ ಸರ್ಕಾರ ಬಜೆಟ್ ಮಂಡನೆ ಮಾಡಿದೆಯೇ ಹೊರತು, ಬಡವರಿಗೆ, ಹಣದುಬ್ಬರ ನಿಯಂತ್ರಣಕ್ಕೆ ಯಾವುದೇ ಕ್ರಮಗಳನ್ನು ಬಜೆಟ್ನಲ್ಲಿ ಘೋಷಿಸಿಲ್ಲ. ಸರ್ಕಾರಿ ಹುದ್ದೆ ಭರ್ತಿಗೆ ಯಾವುದೇ ಕ್ರಮವನ್ನು ಬಜೆಟ್ನಲ್ಲಿ ಕೈಗೊಂಡಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಇನ್ನು ತೆರೆಗೆ ಕಡಿತ ಯಾವುದೇ ಆದರೂ ಸ್ವಾಗತಾರ್ಹ. ಆರ್ಥಿಕತೆ ಉತ್ತೇಜನಕ್ಕೆ ಜನಸಾಮಾನ್ಯರ ಕೈಯಲ್ಲಿ ಹಣವಿರಬೇಕು ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಾತನಾಡಿ, ಪ್ರಧಾನಮಂತ್ರಿ ಕಿಸಾನ್ ಯೋಜನೆಯಿಂದ ವಿಮಾ ಕಂಪೆನಿಗಳು ಲಾಭ ಪಡೆದುಕೊಂಡಿವೆಯೇ ಹೊರತು ರೈತರಿಗೆ ಏನೂ ಲಾಭವಾಗಿಲ್ಲ. ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಯಾವುದೇ ಸ್ಪಷ್ಟ ಯೋಜನೆಗಳಿಲ್ಲ ಎಂದು ತಿಳಿಸಿದ್ದಾರೆ.
ಜೆಡಿಯು ಸಂಸದ ರಾಜೀವ್ ರಂಜನ್ ಪ್ರತಿಕ್ರಿಯಿಸಿ, ಬಜೆಟ್ನಲ್ಲಿ ಮಂಡಿಸಿರುವುದೆಲ್ಲ ಕನಸು ಕಂಡಂತೆ, ಎಚ್ಚರವಾದಾಗ ಯಾವುದೂ ಈಡೇರುವುದಿಲ್ಲ. ಅಂತಹ ಬಜೆಟ್ನ್ನು ಸರ್ಕಾರ ಮಂಡಿಸಿದೆ ಎಂದಿದ್ದಾರೆ.
ಅದಾನಿ ಹಿತಾಸಕ್ತಿ ಈಡೇರಿಸುವ ಬಜೆಟ್ ಇದಾಗಿದೆ. ಕಾರ್ಪೋರೇಟ್ ಪರವಾಗಿಯೇ ಇದ್ದು, ಜನರು ಅವಗಣನೆಗೆ ತಳ್ಳಲ್ಪಟ್ಟಿದ್ದಾರೆ ಎಂದು ಕಾಂಗ್ರೆಸ್ ಸಂಸದ ಕೆ. ಸುರೇಶ್ ತಿಳಿಸಿದ್ದಾರೆ.
ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್, ಟಿಎಂಸಿ ನಾಯಕ ಶತ್ರುಘ್ನ ಸಿನ್ಹಾ ಸಹಿತ ಹಲವರು ಇದೊಂದು ನಿರಾಶದಾಯಕ ಬಜೆಟ್ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.