ಚೆನ್ನೈ, ಫೆ 02 (DaijiworldNews/DB): ಮುಸ್ಲಿಂ ಮಹಿಳೆಯರು ವಿಚ್ಚೇದನ ಪಡೆಯಲು ಕೌಟುಂಬಿಕ ನ್ಯಾಯಾಲಯಕ್ಕೆ ಹೋಗಬೇಕೇ ಹೊರತು ಶರಿಯಾ ಕೌನ್ಸಿಲ್ನಂತಹ ಖಾಸಗಿ ಸಂಸ್ಥೆಗಳಿಗಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ.
ಖಾಸಗಿ ಸಂಸ್ಥೆಗಳು ನೀಡುವ ಯಾವುದೇ ವಿಚ್ಚೇದನ (ಖುಲಾ) ಪ್ರಮಾಣಪತ್ರವು ಕಾನೂನು ಮಾನ್ಯತೆ ಹೊಂದಿರುವುದಿಲ್ಲ ಎಂದೂ ಕೋರ್ಟ್ ತಿಳಿಸಿದೆ.
ಶರಿಯಾ ಕೌನ್ಸಿಲ್ನಿಂದ ತನ್ನ ಪತ್ನಿ 2017ರಲ್ಲಿ ಪಡೆದ ವಿಚ್ಚೇದನ ಪ್ರಮಾಣಪತ್ರ ರದ್ದುಪಡಿಸಬೇಕೆಂದು ಕೋರಿ ವ್ಯಕ್ತಿಯೊಬ್ಬ ಅರ್ಜಿ ಸಲ್ಲಿಸಿದ್ದ. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಮುಸ್ಲಿಂ ಮಹಿಳೆಯರು ವಿಚ್ಚೇದನ ಪಡೆಯಲು ಶರಿಯಾ ಕೌನ್ಸಿಲ್ ಸಹಿತ ಯಾವುದೇ ಖಾಸಗಿ ಸಂಸ್ಥೆಗಳನ್ನು ಸಂಪರ್ಕಿಸಿದರೆ ಆ ಸಂಸ್ಥೆಗಳು ನೀಡುವ ಪ್ರಮಾಣಪತ್ರವು ಕಾನೂನು ಮಾನ್ಯತೆಗೆ ಒಳಪಟ್ಟಿರುವುದಿಲ್ಲ. ವಿಚ್ಚೇದನ ಪಡೆಯಲು ಕೇವಲ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಬೇಕು ಎಂದು ಸೂಚಿಸಿದೆ. ಅಲ್ಲದೆ ತಮಿಳುನಾಡು ತೌಹೀದ್ ಜಮಾತ್ನ ಶರಿಯಾ ಕೌನ್ಸಿಲ್ ಮಹಿಳೆಗೆ ನೀಡಿದ್ದ ಖುಲಾ ಪ್ರಮಾಣಪತ್ರವನ್ನು ಹೈಕೋರ್ಟ್ ರದ್ದುಗೊಳಿಸಿದೆ. ನ್ಯಾಯಮೂರ್ತಿ ಸಿ. ಶಿವರಾಮನ್ ಅವರ ನೇತೃತ್ವದ ಪೀಠವು ಈ ಆದೇಶ ನೀಡಿದೆ.
ಮುಸ್ಲಿಂ ಪುರುಷರು ಪತ್ನಿಯರಿಗೆ ತಲಾಕ್ ನೀಡುವಂತೆ, ಪತಿಗೆ ವಿಚ್ಚೇದನ ನೀಡಲು ಮಹಿಳೆಯರಿಗೂ ಹಕ್ಕಿದೆ. ಇದನ್ನು ಖುಲಾ ಎಂದು ಕರೆಯಲಾಗುತ್ತದೆ. ಪತಿಗೆ ವಿಚ್ಚೇದನ ನೀಡಲು ಬಯಸಿದ್ದ ಮಹಿಳೆಯೊಬ್ಬರಿಗೆ ಚೆನ್ನೈನ ಶರಿಯಾ ಸಂಸ್ಥೆಯೊಂದು 2017ರಲ್ಲಿ ಖುಲಾ ಪ್ರಮಾಣಪತ್ರ ನೀಡಿತ್ತು. ಆದರೆ ಇದನ್ನು ಪ್ರಶ್ನಿಸಿ ಆಕೆಯ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.