ಬೆಂಗಳೂರು, ಫೆ 02 ( DaijiworldNews/MS): ರಾಜ್ಯದಲ್ಲಿ ಅಭಿವೃದ್ಧಿಯ ರಾಜಕಾರಣವನ್ನು ಮಾಡಬೇಕೆ ಹೊರತು ಸಿ.ಡಿ ರಾಜಕಾರಣವಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, "ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಜಾರಕಿಹೊಳಿ ಹತಾಶೆಗೊಂಡಿದ್ದು ಅದಕ್ಕಾಗಿ ಸುಖಾಸುಮ್ಮನೆ ಆರೋಪದಲ್ಲಿ ತೊಡಗಿದ್ದಾರೆ" ಎಂದು ಹೇಳಿದ್ದಾರೆ.
ಭಾರತೀಯರ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶೇಷ ಗೌರವವಿದೆ. ಹೀಗಾಗಿ ಓರ್ವ ಮಹಿಳೆಗೆ ವಿಷಕನ್ಯೆ ಎಂಬ ಪದ ಬಳಸುವುದು ಸರಿಯಲ್ಲ. ಬಿಜೆಪಿ ಶಾಸಕ ಯತ್ನಾಳ್ ಅವರೇ ಸಿ.ಡಿ ಹಿಂದೆ ಬಿಜೆಪಿ ನಾಯಕರ ಕೈವಾಡ ಇದೆ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಗೊಂದಲಕಾರಿ ಮಾತುಗಳನ್ನಾಡಬಾರದು ಎಂದು ಹೇಳಿದ್ದಾರೆ.
ಸಹಕಾರ ಇಲಾಖೆಯಲ್ಲಿ ಅಕ್ರಮ ನಡೆಸಲಾಗಿದೆ ಎಂದು ರಮೇಶ್ ಜಾರಕಿಹೊಳಿ ಅವರ ಆರೋಪಕ್ಕೆ ಉತ್ತರಿಸಿ, "ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿ ಸರ್ಕಾರ ರಾಜ್ಯ ಮತ್ತು ಕೇಂದ್ರದಲ್ಲಿದೆ. ಇಲ್ಲಿಯವರೆಗೆ ಏಕೆ ಈ ಬಗ್ಗೆ ಮೌನ ವಹಿಸಿದ್ದರು ಎಂದು ಜನತೆಗೆ ತಿಳಿಸಬೇಕು" ಎಂದು ಒತ್ತಾಯಿಸಿದ್ದಾರೆ.