ಮಂಡ್ಯ, ಫೆ 02 (DaijiworldNews/DB): ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸುಮಲತಾ ಅಂಬರೀಶ್ ಸಿದ್ದತೆ ನಡೆಸುತ್ತಿದ್ದಾರೆ. ತಮ್ಮ ಸ್ಪರ್ಧೆಗೆ ಮೂರು ಕ್ಷೇತ್ರಗಳನ್ನು ಆಯ್ಕೆ ಮಾಡಿರುವ ಅವರಿಗೆ ಇದೀಗ ಎರಡು ಕ್ಷೇತ್ರಗಳಲ್ಲಿ ಭಾರೀ ಸಂಕಷ್ಟ ಎದುರಾಗಿದೆ. ಕಾರಣ ರೈತ ಸಂಘದ ವಿರೋಧ.
ರಾಷ್ಟ್ರ ರಾಜಕಾರಣದಿಂದ ಸುಮಲತಾ ರಾಜ್ಯ ರಾಜಕಾರಣಕ್ಕೆ ಬರಲು ಭಾರೀ ಸಿದ್ದತೆಯಲ್ಲಿ ತೊಡಗಿದ್ದಾರೆ. ಈ ಬಾರಿಯ ಕರ್ನಾಕಟ ವಿಧಾನಸಭಾ ಚುನಾವಣೆಗೆ ಮಂಡ್ಯ, ಮೇಲುಕೋಟೆಯ ಕ್ಷೇತ್ರಗಳ ಮೇಲೆ ಸುಮಲತಾ ಕಣ್ಣಿಟ್ಟಿದ್ದರು. ಆದರೆ ಈ ಎರಡೂ ಕ್ಷೇತ್ರಗಳಲ್ಲಿ ಸುಮಲತಾ ಸ್ಪರ್ಧಿಸುವುದಕ್ಕೆ ರೈತ ಸಂಘದಿಂದ ವಿರೋಧ ಎದುರಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ರೈತ ಸಂಘವು ಸುಮಲತಾ ಗೆಲುವಿಗೆ ಸಾಕಷ್ಟು ಶ್ರಮಿಸಿತ್ತು. ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಗೆ ಸ್ವತಃ ಸಂಘದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲು ಸಂಘ ಮುಂದಾಗಿದೆ. ಮಂಡ್ಯದಿಂದ ಮಧುಚಂದನ್ ಹಾಗೂ ಮೇಲುಕೋಟೆಯಿಂದ ದರ್ಶನ್ ಪುಟ್ಟಣ್ಣಯ್ಯ ಸ್ಪರ್ಧೆ ಬಹುತೇಕ ಅಂತಿಮಗೊಂಡಿದೆ. ಇವರಿಬ್ಬರೂ ಇತ್ತೀಚೆಗೆ ಘೋಷಿಸಲ್ಪಟ್ಟ ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಸುಮಲತಾ ಅಥವಾ ಯಾರೇ ಬಂದು ಕೇಳಿದರೂ ಹಿಂದೆ ಸರಿಯುವ ಮಾತೇ ಇಲ್ಲ ಎಂಬುದಾಗಿ ಈಗಾಗಲೇ ರೈತ ಸಂಘದ ಮುಖಂಡರು ಹೇಳಿದ್ದು, ಈ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸುಮಲತಾ ಕನಸಿಗೆ ಬಿಸಿ ತುಪ್ಪವಾಗಿ ಪರಿಣಮಿಸಲಿದೆಯೇ ಎಂಬುದು ಕಾದು ನೋಡಬೇಕಿದೆ.