ಬಿಹಾರ, ಫೆ 02 (DaijiworldNews/DB): 500 ಮಂದಿ ಹುಡುಗಿಯರ ಮಧ್ಯೆ ತಾನೊಬ್ಬನೇ ಹುಡುಗ ಪರೀಕ್ಷಾ ಕೇಂದ್ರದಲ್ಲಿರುವುದನ್ನು ನೋಡಿ ಹುಡುಗ ಮೂರ್ಛೆ ತಪ್ಪಿ ಬಿದ್ದ ಘಟನೆ ಬಿಹಾರದಲ್ಲಿ ನಡೆದಿದೆ.
ಅಲ್ಲಮ ಇಕ್ಬಾಲ್ ಕಾಲೇಜಿನ ಮನೀಶ್ ಶಂಕರ್ ಪ್ರಸಾದ್ ( 17 ) ಬಿಹಾರದ ಬೋರ್ಡ್ ಪರೀಕ್ಷೆಯಲ್ಲಿ ಗಣಿತ ಪರೀಕ್ಷೆ ಬರೆಯಲೆಂದು ಸುಂದರ್ಗಢ್ನ ಬ್ರಿಲಿಯಂಟ್ ಕನ್ವೆನ್ಷನ್ ಸ್ಕೂಲ್ನ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದ. ಅಲ್ಲಿ 500 ಮಂದಿ ಹೆಣ್ಣು ಮಕ್ಕಳು ಪರೀಕ್ಷೆ ಬರೆಯಲು ಆಗಮಿಸಿದ್ದರು. ಆದರೆ ಒಬ್ಬನೇ ಒಬ್ಬ ಹುಡುಗ ಕೂಡಾ ಇರಲಿಲ್ಲ. ಇದರಿಂದ ಪ್ರಸಾದ್ ಆತಂಕಕ್ಕೊಳಗಾಗಿದ್ದ.
ಇನ್ನು ಪರೀಕ್ಷಾ ಕೇಂದ್ರದೊಳಗೆ ಪರೀಕ್ಷೆ ಬರೆಯಲೆಂದು ಹೋದ ಮನೀಶ್ ಶಂಕರ್ ಪ್ರಸಾದ್ ಏಕಾಂಗಿಯಾಗಿ ಪರೀಕ್ಷೆ ಬರೆಯುತ್ತಿದ್ದ ವೇಳೆ ಮೂರ್ಛೆ ತಪ್ಪಿ ಬಿದ್ದಿದ್ದಾನೆ. ಅಲ್ಲದೆ ಆತನಿಗೆ ಜ್ವರವೂ ಕಾಣಿಸಿಕೊಂಡಿದೆ. ಕೂಡಲೇ ಆತನನ್ನು ಆಂಬುಲೆನ್ಸ್ ಮೂಲಕ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯ ಯುವಕ ಚೇತರಿಸಿಕೊಳ್ಳುತ್ತಿರುವುದಾಗಿ ಆತನ ತಂದೆ ಸಚ್ಚಿದಾನಂದ ಮಾಹಿತಿ ನೀಡಿದ್ದಾರೆ.
ಮನನೀಶ್ ಪರೀಕ್ಷೆ ಬರೆಯುತ್ತಿದ್ದ ಪರೀಕ್ಷಾ ಕೇಂದ್ರದಲ್ಲಿ ಎಲ್ಲಾ ಹುಡುಗಿಯರೇ ಇದ್ದರು. ಒಬ್ಬನೇ ಒಬ್ಬ ಹುಡುಗನೂ ಅಲ್ಲಿರಲಿಲ್ಲ. ಇದರಿಂದಾಗಿ ಆತನ ಮನಸ್ಸಿಗೆ ಬೇಸರವಾಗಿದ್ದು, ಆತ ಮೂರ್ಛೆ ತಪ್ಪಿ ಬಿದ್ದಿದ್ದಾನೆ ಎಂದು ಆತನ ಚಿಕ್ಕಮ್ಮ ವಿವರಿಸಿದ್ದಾರೆ.