ಲಕ್ನೋ, ಫೆ 02 ( DaijiworldNews/MS): ನೇಪಾಳದಿಂದ ತರಿಸಲಾಗಿರುವ ಎರಡು ಸಾಲಿಗ್ರಾಮ ಶಿಲೆಗಳು ಬುಧವಾರ ತಡರಾತ್ರಿ ಉತ್ತರ ಪ್ರದೇಶದ ಅಯೋಧ್ಯೆಗೆ ತಲುಪಿವೆ. ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಟಾಪನೆಯಾಗಲಿರುವ ಭಗವಾನ್ ರಾಮ ಹಾಗೂ ಜಾನಕಿ ಮಾತೆಯ ವಿಗ್ರಹ ಕೆತ್ತಲೆಂದು ತರಿಸಲಾಗಿದೆ.
ಸ್ಥಳೀಯರು ಹಾಗೂ ಅರ್ಚಕರು ಕಲ್ಲಿಗೆ ಪೂಜೆ ಸಲ್ಲಿಸಿ, ಹೂವಿನಿಂದ ಅಲಂಕಾರ ಮಾಡಿ ಸ್ವಾಗತಿಸಿದರು. ಬಳಿಕ ಅದನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ಗೆ ಹಸ್ತಾಂತರಿಸಲಾಯ್ತು.
60 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಈ ಶಿಲೆಗಳು ಮೈಯಾಗ್ಡಿ ಹಾಗೂ ಮುಸ್ತಂಗ್ ಜಿಲ್ಲೆಯಲ್ಲಿ ಹರಿಯುವ ಕಾಳಿ ಗಂಡಕಿ ನದಿ ದಡದಲ್ಲಿ ಮಾತ್ರ ಈ ಶಿಲೆಗಳು ಲಭ್ಯವಿದ್ದು, ಇವುಗಳನ್ನು ಸೀತಾ ದೇವಿಯ ಜನ್ಮಸ್ಥಳವಾದ ನೇಪಾಳದ ಜಾನಕಪುರಿಂದ ಭಾರೀ ಟ್ರಕ್ಗಳ ಮೂಲಕ ತರಲಾಗಿದೆ. ಒಂದು ಬಂಡೆ 26 ಟನ್ ಮತ್ತು ಇನ್ನೊಂದು 14 ಟನ್ ತೂಕವಿದೆ.
ಬುಧವಾರ ಗೋರಖಪುರಕ್ಕೆ ಈ ಶಿಲೆಗಳು ತಲುಪಿದ್ದು, ಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ಶಿಲೆ 18 ಟನ್ ಹಾಗೂ ಇನ್ನೊಂದು ಶಿಲೆ 16 ಟನ್ ತೂಕವಿದ್ದು, ಇವುಗಳಲ್ಲಿ ಮೂರ್ತಿ ತಯಾರಿಕೆ ಸಾಧ್ಯ ಎಂದು ತಾಂತ್ರಿಕವಾಗಿ ಹಾಗೂ ವೈಜ್ಞಾನಿಕವಾಗಿ ಖಚಿತಪಡಿಸಿಕೊಳ್ಳಲಾಗಿದೆ ಎಂದು ನೇಪಾಳದ ಅಧಿಕಾರಿಗಳು ತಿಳಿಸಿದ್ದಾರೆ.