ನವದೆಹಲಿ, ಫೆ 02 ( DaijiworldNews/MS): ಅದಾನಿ ಸಮೂಹ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯಬೇಕೆಂದು ಪ್ರತಿಪಕ್ಷ ಸದಸ್ಯರು ಭಾರಿ ಗದ್ದಲವೆಬ್ಬಿಸಿದ್ದರಿಂದ ಸಂಸತ್ತಿನ ಉಭಯ ಸದನಗಳನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.
ಅದಾನಿ ಗ್ರೂಪ್ ಬಿಕ್ಕಟ್ಟನ್ನು ಸಂಸತ್ತಿಸ ಜಂಟಿ ಸದನ ಸಮಿತಿ ಅಥವಾ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಮತ್ತಿತರ ವಿಪಕ್ಷಗಳು ಒತ್ತಾಯಿಸುತ್ತಿದೆ.
ಬಜೆಟ್ ಅಧಿವೇಶನದ ಸಂಸತ್ ಕಲಾಪ ಪುನರಾರಂಭವಾಗುತ್ತಿದ್ದಂತೆ ಸದನದಲ್ಲಿ ಅದಾನಿ ಹಗರಣದ ವಿಷಯದ ಬಗ್ಗೆ ಚರ್ಚಿಸಲು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾವನೆ ಮಂಡಿಸಿದರು.ಆದರೆ ಅವುಗಳನ್ನು ಸಭಾಪತಿ ತಿರಸ್ಕರಿಸಿದ ನಂತರ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದ್ದರಿಂದ ಉಭಯ ಸದನಗಳನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.
ಆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಖರ್ಗೆ, ಸಾರ್ವಜನಿಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು, ಅದಾನಿ ಸಮೂಹ ಸಂಸ್ಥೆಯ ಬಿಕ್ಕಟ್ಟಿನ ಬಗ್ಗೆ ಜಂಟಿ ಸದನ ಸಮಿತಿ (ಜೆಪಿಸಿ) ಅಥವಾ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಯಾಗಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದರು.