ನವದೆಹಲಿ, ಫೆ 02 (DaijiworldNews/DB): ನಗರದೊಳಗೆ ಸಂಚರಿಸಲು ಪ್ರಯಾಣಿಕರಿಗೆ ಸುಲಭ ಸಾಧ್ಯವಾಗುವ ನಿಟ್ಟಿನಲ್ಲಿ ಭಾರತೀಯ ರೈಲ್ವೇ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದೆ. ವಂದೇ ಭಾರತ್ ಎಕ್ಸ್ಪ್ರೆಸ್ ಮಾದರಿಯಲ್ಲಿ ವಂದೇ ಮೆಟ್ರೋ ಸೇವೆ ಆರಂಭಿಸಲು ಚಿಂತನೆ ನಡೆಸಲಾಗಿದೆ.
2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾದ ಬಳಿಕ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಈ ಘೋಷಣೆ ಮಾಡಿದ್ದು, ನಗರಗಳ ಸಮೀಪ ವಾಸಿಸುವ ಜನರಿಗಾಗಿ ಈ ನಿರ್ಣಾಯಕ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.
ವಂದೇ ಭಾರತ್ ಎಕ್ಸ್ಪ್ರೆಸ್ನ ಮಿನಿ ಆವೃತ್ತಿಯಾಗಿ ವಂದೇ ಮೆಟ್ರೋ ರೈಲುಗಳನ್ನು ಪರಿಚಯಿಸಲಾಗುವುದು. ನೌಕರರು, ವ್ಯಾಪಾರಿಗಳು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಈ ರೈಲಿನಿಂದ ಹೆಚ್ಚು ಅನುಕೂಲವಾಗಲಿದೆ. ವಿವಿಧ ಕೆಲಸಗಳಿಗಾಗಿ ನಗರಗಳಿಗೆ ಜನರಿಗೆ ಪ್ರಯಾಣ ನಡೆಸಲು ಈ ರೈಲು ಉಪಯುಕ್ತವಾಗಲಿದೆ ಎಂದವರು ತಿಳಿಸಿದರು.
ವಂದೇ ಮೆಟ್ರೋದ ವಿನ್ಯಾಸ ಮತ್ತು ನಿರ್ಮಾಣ ಕಾರ್ಯ ಈ ವರ್ಷಾಂತ್ಯದೊಳಗೆ ಪೂರ್ಣಗೊಳ್ಳಲಿದೆ. ಮುಂದಿನ ವರ್ಷದಲ್ಲಿ ಸೇವೆ ಲಭ್ಯವಾಗುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ನಡೆಸಲಾಗುವುದು. ಇನ್ನು ದೇಶೀಯವಾಗಿ ತಯಾರಾದ ಮೊದಲ ಹೈಡ್ರೋಜನ್ ರೈಲು ಈ ವಷಾಂತ್ಯಕ್ಕೆ ಸೇವೆಗೆ ಇಳಿಯಲಿದೆ ಎಂದರು.